ಸೋಮವಾರ, ಸೆಪ್ಟೆಂಬರ್ 30, 2013

ಕಳ್ ಮಂಜ ಹಾಳ್ಡ್ ವೇರ್


ಕಳ್ ಮಂಜ ಮದುವೆ ಆಗೋಕೆ ಹೆಣ್ಣು ಹುಡುಕ್ತಾ ಇದ್ದ......ಯಲ್ಲರ ಹತ್ತಿರ ಹೇಳಿದ್ದ... ಯಾವುದಾದ್ರು ಹುಡುಗಿ ಇದ್ರೆ ಹೇಳಿ ಅಂತ...ಒಂದು ಸಲ ಯಂಕ್ಟನ ಸೋದರಮಾವ ಭೀಮಪ್ಪ ಊರಿಗೆ ಬಂದಾಗ ಅವರಿಗೂ ಹೇಳಿದ...
ಚುಂಚುನಕುಪ್ಪೆನಾಗೆ ಒಂದು ಒಳ್ಳೆ ಸಂಬಂಧ ಐತೆ ...ಆದ್ರೆ ಹುಡುಗ ಸಾಪ್ಟ್ ವೇರು ಇಲ್ಲ ಹಾಲ್ಡ್ ವೇರು ಬೇಕಾಂತರೆ ಅಂದ್ರು ಭೀಮಪ್ಪ...ನಾನು ಹಾಲ್ಡ್ ವೇರ್ ಪೀಲ್ಡ್ ನಾಗೆ ಇರೋದು ಅಂತೇಳಿ ಅಂದ ಮಂಜ...ಸರಿ ಅಂತ ಹುಡುಗಿ ಮನೆಗೆ ಪೋನ್ ಮಾಡಿ ಹೇಳಿರು ಭೀಮಪ್ಪ....ಅವರು ಸಹ ಕರೆದುಕೊಂಡ್ ಬನ್ನಿ ಅಂದ್ರು....
ಒಂದು ಟಿಟಿ ಗಾಡಿ ಮಾಡ್ಕಂಡು ಹನ್ನೆಳ್ಡು ಜನ ಹೊಳಟ್ರು...ಕಳ್ ಮಂಜ ಸಿದ್ಲಿಂಗು ತವ ಕಂಪ್ಯೂಟ್ರು, ಸಾಪ್ಟ್ ವೇರು, ಹಾಲ್ಡ್ ವೇರು ಯಲ್ಲ ವಸಿ ತಿಳ್ಕಂಡಿದ್ದ...ಕಿಸ್ನ, ಯಂಕ್ಟ ಯಲ್ಲ ಬಡ್ಡಿ ಹೈದ್ನೆ ಯಾವಾಗ್ಲಾ ಕಲಿತೆ ಹಾಳ್ಡ್ ವೇರು ಅನ್ನೋರು.....ಅವರಿಗೂ ಅದೇನು ಅಂತ ಗೊತ್ತಿರಲಿಲ್ಲ...
ಚುಂಚುನಕುಪ್ಪೆಗೆ ಹೋಗ್ತಾ ಇದ್ದಂಗೆ ಜೂಸು ತಿಂಡಿ ಯಲ್ಲ ಕೊಟ್ಟರು....ಯಂಕ್ಟ ಕಿಸ್ನ ಯಲ್ಲ ಸಕ್ಕತಾಗಿ ತಿಂದ್ರು...ಎನ್ಲಾ ಬರೀ ಹೆಣ್ಣು ನೋಡೋಕ್ ಬಂದಾಗಲೇ ಈ ಪಾಟಿ ಐಟಮ್ಸ್ ಮಡಗವರಲ್ಲ ಇನ್ನ ಮದ್ವೆಗೆ ಏನೇನ್ ಮಾಡ್ಸಾರು.....ಗೋಬಿ, ಚಿಪ್ಸ್, ಪಕೋಡ, ಸಮೋಸ, ಸಾವಿಗೆ ಬಾತು, ಮೈಸೂರ್ ಪಾಕು, ಜುಲೇಬಿ, ರಸ್ನ, ಬಾಳೆಹಣ್ಣು ಯಲ್ಲ ಇತ್ತು...ಒಳ್ಳೆ ಕುಳನೇ ತೋರಿಸಿದ್ದೀಯಾ ಕನ್ಲಾ ಅಂದ ಕಿಸ್ನ.....
ಹುಡುಗಿನಾ ನೋಡಿ ಆತು...ಹುಡುಗಿ ಅಪ್ಪ ಮಂಜನ್ನ ಕೇಳಿರು...ಏನ್ ಕೆಲಸ ಅಂತ....ನನದೂ ಹಾಲ್ಡ್ ವೇರ್ ಪೀಲ್ಡು ಅಂದ...
ಸರಿ ಹುಡುಗಿ ಕೇಳುದ್ಲು...ನಿಮ್ಮ ಹತ್ರ ಗ್ರೀನ್ ಕಾರ್ಡ್ ಇದ್ಯಾ.....ಓ ಐತೆ...ಹಸಿರು ಕಾಲ್ಡ್ ಅಲ್ವ....ನಮ್ಮವ್ವನೇ ಮಾಡಿಸವಳೆ ಅಂದ ಮಂಜ....ಹುಡುಗಿಗೂ ಗ್ರೀನ್ ಕಾರ್ಡ್ ಅಂದ್ರೇನು ಅಂತ ಗೊತ್ತಿರಲಿಲ್ಲ. ಸುಮ್ನೆ ಅಮೇರಿಕಾಗೆ ಹೋಗೋಕೆ ಅದು ಬೇಕು ಅಂತ ಅಷ್ಟು ಗೊತ್ತಿತ್ತು....
ಅಷ್ಟಕ್ಕೆ ಸುಮ್ನೆ ಇರದೆ ಹಸ್ರು ಕಾಲ್ಡಿಗೆ ಸಕ್ಕರೆನೇ ಕೊಡಕಿಲ್ಲ ನಮ್ಮೂರಾಗೆ ಅಂದ...ಆಗ ಯಾಕೊ ಡೌಟ್ ಹೊಡಿತು ಅವರಿಗೆ....ಸರಿ ನಾವು ಆಮ್ಯಾಕೆ ಹೇಳ್ತೀವಿ ಅಂತ ಕಳಿಸಿಕೊಟ್ರು....ಆಮ್ಯಾಕೆ ಭೀಮಪ್ಪನ ತವ ಕೇಳಿರು ಮಂಜನ ಕೆಲಸ ಏಲ್ಲಿ ಕೇಳಿ ಅಂತ...ಆಗ ಕೇಳಿದ್ಕೆ ಬಾಯಿಬುಟ್ಟ ಮಂಜ ...
ಟೌನ್ ನಾಗೆ ಕರಿಮುಲ್ಲಾ ಸಾಬಿ ಹಾರ್ಡ್ ವೇರ್ ಅಂಗಡಿನಾಗೆ ನಟ್ಟು ಬೋಲ್ಟು ತೂಕ ಹಾಕೊ ಕೆಲಸ....ಅದುನೂ ಹಾರ್ಡ್ ವೇರ್ ಪೀಲ್ಡು ......
ಥೂ ನಿನ್ ಬಾಯ್ಗೆ ನಟ್ಟು ಬೋಲ್ಟ್ ಇಕ್ಕ.....

ಮಂಗಳವಾರ, ಆಗಸ್ಟ್ 27, 2013

ಕೃಷ್ಣ ಜನ್ಮಾಷ್ಟಮಿ


ಶ್ರೀ ಕೃಷ್ಣ ಪರಮಾತ್ಮನನ್ನು ಕ್ಷಮೆ ಯಾಚಿಸುತ್ತ )

ನೋಡ್ರಲಾ ಇನ್ನ ಮ್ಯಾಕೆ ನಾವು ಬರೀ ಗಣೇಸನ ಹಬ್ಬ ಮಾತ್ರ ಮಾಡೋದಲ್ಲ.....ಯಲ್ಲಾ ಹಬ್ಬನೂ ಆಚಾರಣೆ ಮಾಡಮ ಅಂದ ಕಳ್ ಮಂಜ.....ಯಲಾರೂ ಆಯ್ತಪ್ಪ ಅಂದ್ರು....ಯಾವುದ್ಲಾ ನೆಕ್ಸಟು ಹಬ್ಬ ಅಂದ ಕ್ಯಾತೆ ರಾಮ....ಗೋಕುಲಸ್ಟಮಿ ಕನ್ಲಾ.... ಇದ್ಯಾವುದಲಾ ಹೊಸ ಹಬ್ಬ ನಾ ಕ್ಯೊಳೆ ಇಲ್ಲ....

ಏ ಇದು ಕಿಸ್ನ ಹುಟ್ಟಿದ ದಿನ ಕಣಲಾ... ಈ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ಇಲ್ವ ಹಂಗೆ.....ನಮ್ಮ ಕ್ವಾಟ್ಲೆ ಕಿಸ್ನನದಾ....ಏ ಥೂ.. ಅವನಲ್ಲ ಕನ್ಲಾ...ಶ್ರೀ ಕೃಷ್ಣ ಪರಮಾತ್ಮನದು....

ಸರಿ ಬುದ್ವಾರ ಗಣೇಸನ ಗುಡಿ ತವನೇ ಮಾಡಣ ಈ ಕಿತ.....ಡೆಕೊರೇಸನ್ ಯಲ್ಲಾ ಕಳ್ ಮಂಜ ವಹಿಸಿಕೊಂಡ....ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕ್ಯಾತೆ ರಾಮನ ಕಡೆಯಿಂದ ಅಂತ ಆತು....

ಬುದ್ವಾರ ಬೆಳ್ಳಿಗೆ ಬಂತು... ಗೌಡ್ರು ಸ್ಯಾನೆ ಸಿಟ್ಟು ಮಾಡ್ಕೊಂಡು ಕೈನಾಗೆ ಮಚ್ಚು ತಕ್ಕಂಡು ಎಲ್ಲಿ ಆ ಕಿಸ್ನ ಅಂತ ಕಿರಚಾಡಿಕೊಂಡು ಗುಡಿತಕ್ಕೆ ಬತ್ತ ಇದ್ದ.....ಯಲ್ರಿಗೂ ಆಸ್ಚರ್ಯ....ಸಿವಮ್ಮನ ಹೋಟೆಲ್ ತವ ಕುಂತಿದ್ದ ಜನ ಎಲ್ಲಾ ಇವನಿಗೇನ್ಲಾ ಬತು ದೊಡ್ಡರೋಗ...ಅಲ್ಲಿ ನೋಡಿರೆ ಕಿಸ್ನನ ಹಬ್ಬ ಮಾಡ್ತಾವ್ರೆ...ಇವನು ಕಿಸ್ನನ ಬೈಕೊಂಡು ಓಡ್ತಾವನೆ ಅಂತಿದ್ರು.....ಸಿವಮ್ಮ ಥೂ ಆ ಗೌಡನ ಕೈ ಸೇದೋಗ ಅಂತ ಸಾಪನೂ ಹಾಕಿಲು....

ಗುಡಿ ತವ ಬಂದು ಎಲ್ಲಿ ಆ ಬಡೆತ್ತದು ಅಂತಿದ್ದ ಗೌಡ....ಎಲ್ಲರೂ ಸಮಾಧಾನ ಮಾಡಿರು. "ಏನಾತು ಗೌಡ್ರೆ" ಅಂದ ಬುಲ್ಡೆ ಬಸವ.....ಎನ್ಲಾ ಇದು ಬೋಲ್ಡುನೋಡಲಾ ಅಂದ...ನೋಡಿರೆ ಕಳ್ ಮಂಜ "ಕಿಸ್ನ ಜಯಂತಿ" ಅಂತ ಗುಡಿ ಬಾಗಿಲ ತವ ದೊಡ್ಡದಾಗಿ ಹೂವಿನ ಆರ್ಚ್ ಮಾಡಿ ಹಾಕಿದ್ದ....

ಆಮ್ಯಾಕೆ ಮಾಲಿಂಗ ಬಿಡ್ಸಿ ಹೇಳಿದ....ಇದು ಕೃಷ್ಣ  ಜನ್ಮಾಷ್ಟಮಿ ಗೌಡ್ರೆ ಅಂತ....ಓ ಹಂಗ......ಯಾವನೋ ಬಡ್ಡಿ ಮಗ ಬೆಳ್ಳಿಗೆ ಮನೆ ತವ ಬಂದು... ಗೌಡ್ರೆ ನಿಮ್ಮ ಮಗಳು ಜಯಂತಿಗೂ ಆ ಕಿಸ್ನನಿಗೂ ಮದ್ವೆ ಅಂತೆ...ಬೋಲ್ಡ್ ಹಾಕವ್ರೆ ಗುಡಿ ತವ ಅಂದ....ಅದ್ಕೆ ಓಡೋಡ್ ಬಂದೆ...ಅಂದ ಗೌಡ.

ಆ ಕಳ್ ಮಂಜನೆಯಾ ಹಾಕಿದ್ದು
ನೀವೆ ಹೇಳುದ್ರಿ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ತರನೇ ಕಿಸ್ನ ಹುಟ್ಟಿದ ದಿನ ಅಂತ ಅದುಕ್ಕೆ ಹಾಕಿದೆ.... ಅಂದ ಕಳ್ ಮಂಜ
ಥೂ ನಿನ್ನ ಮಕ್ಕೆ.......

ಇನ್ನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹೆಂಗಾತು ಅಂತ ನಾಳೆ ಹೇಳ್ತೀನಿ....
ಕೃಷ್ಣ  ಜನ್ಮಾಷ್ಟಮಿಯ ಶುಭಾಶಯಗಳು.


ಭಾನುವಾರ, ಜೂನ್ 16, 2013

ಆಶ್ವಾಸನೆ


ಪ್ರಳಯವಾದರೂ
ಕೈ ಬಿಡುವುದಿಲ್ಲವೆಂದು
ಮಂತ್ರಿಗಳು ಕೊಟ್ಟರು
ಆಶ್ವಾಸನೆ....
ಪ್ರಣಯಕ್ಕೂ
ಮುನ್ನವೇ
ಕೈ ಬಿಡಲು ಕಾರಣ
ಆಶಾ ವಾಸನೆ....


ಬುಧವಾರ, ಏಪ್ರಿಲ್ 24, 2013

ಪ್ರದರ್ಶನ



ಬಳಸುವುದು ಹೇಗೆಂದು     
ತೋರಿಸಿದರು ಮಂತ್ರಿಗಳು
ಉದ್ಘಾಟಿಸಿ
ಸಾರ್ವಜನಿಕ ಗ್ರಂಥಾಲಯ....
ಮಾಧ್ಯಮಗಳಿಗೆ ಕುತೂಹಲ
ನೋಡಲು ಹೇಗೆ
ಉದ್ಘಾಟಿಸುವರೋ
ಸಾರ್ವಜನಿಕ ಶೌಚಾಲಯ....


ಸೋಮವಾರ, ಏಪ್ರಿಲ್ 22, 2013

ಶಿಬಿರ



ರಕ್ತ ದಾನ
ಮಾಡಿ ಉದ್ಘಾಟಿಸಿದರು
ಮಂತ್ರಿಗಳು 
ರಕ್ತ ಶಿಬಿರವನ್ನ...
ಕುಟುಂಬ ಯೋಜನೆ 
ಶಿಬಿರ ಉದ್ಘಾಟನೆಗೆ 
ಕಳುಹಿಸಿದರು
ತಮ್ಮ ಶ್ರೀಮತಿಯನ್ನ........



ಭಾನುವಾರ, ಡಿಸೆಂಬರ್ 16, 2012

ನನ(ನ್ನ) ಗಲ್ಲ


ಕೋಪವೇಕೆ ನಲ್ಲೆ....?
ನೀನೆ ಕೇಳಿದೆ
ನಿನಗೆ ಬೇಕಾ..? ಎಂದು
ನನಗಲ್ಲ....!!!
ಈ ಮಗುವಿಗೆಂದು
ಹೇಳದೆಯೇ
ತೋರಿಸಿದೆ
ನನ್ನ ಗಲ್ಲ.......!!!! :)

ಸೋಮವಾರ, ನವೆಂಬರ್ 19, 2012

ಅ(ಭ)ಯ




ಹೆದರಲಿಲ್ಲ ನೀನು
ಆಗುವುದೆಂದು ಪ್ರಳಯ...

ನಡುಗುವುದೇಕಿಂದು
ಆಯಿತೆಂದು ಪ್ರಣಯ....

ಆ ಭಯ ಓಡಿಸುವೆನೆಂದು
ಕೊಡುವೆ ನಿನಗೆ ಅಭಯ.....

ಕೈ ಬಿಡುವೆನೆಂದು
ಬೇಡ ನಿನ್ನಲ್ಲಿ ಸಂಶಯ....

ಮತ್ತೆಂದೂ ಬಾರದು 
ನಮಗೆ ಈ ಪ್ರಾಯ....



ಶುಕ್ರವಾರ, ಅಕ್ಟೋಬರ್ 19, 2012

ಬಲ



ನನ್ನ ವರಿಸುವ 
ನಿನ್ನ ಹಂಬಲ....

ಅದಕ್ಕಿಲ್ಲವೆಂದು
ನಿನ್ನಪ್ಪನ ಬೆಂಬಲ...

ಆಗಿದೆಯಾ ನಿನ್ನ
ಮನ ಗೊಂದಲ...

ಚಿಂತಿಸದಿರು ನಲ್ಲೆ
ನಮ್ ಪ್ರೀತಿಗೆ ನೂರಾನೆ ಬಲ....




ಬುಧವಾರ, ಸೆಪ್ಟೆಂಬರ್ 05, 2012

ನುಂಗಲಾರದ ತುತ್ತು





ನನ್ನ ಅಮ್ಮ ಇದ್ದಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮನದಲ್ಲೆ ಆ ದೇವರನ್ನು ಶಪಿಸುತ್ತಿದ್ದೆ. ಅಮ್ಮ ಹೇಗಿದ್ದಳು ಎಂದು ಕಲ್ಪಿಸಲು ಸಹ ಆಗುತ್ತಿಲ್ಲ. ಅಮ್ಮ ಅಂತ ನಾನು ಅವಳನ್ನು ಕರೆಯುವ ಮೊದಲೆ ಅವಳು ಈ ಲೋಕ ತ್ಯಜಿಸಿದ್ದಳು. ಅಪ್ಪ ಅಣ್ಣನೊಂದಿಗೆ ನನ್ನನ್ನು ಸಹ ನೋಡಿಕೊಳ್ಳಲೆಂದು ಮಲತಾಯಿಯನ್ನು ತಂದಿದ್ದರು. ನಾನು ಅವಳನ್ನು ಅಮ್ಮ ಅಂತ ಅಂದುಕೊಂಡಿದ್ದರೂ ಅವಳಿಗ್ಯಾಕೊ ನಾನು ಮಗಳು ಅಂತ ಅನ್ನಿಸಲೇ ಇಲ್ಲ. ಕುಣಿಗಲ್ ತಾಲೂಕು ಮಾದೆಗೌಡನದೊಡ್ಡಿ ಅನ್ನೋ ಸಣ್ಣಗ್ರಾಮದಲ್ಲಿ ಎಳನೇ ತರಗತಿ ಮುಗಿಸಿದರೂ ಮುಂದೆ ಓದಲು ನಮ್ಮೂರಲ್ಲಿ ಪ್ರೌಢ ಶಾಲೆ ಇರಲಿಲ್ಲ. ಅಪ್ಪ ಬಡರೈತನಾಗಿದ್ದರೂ ಮಗಳು ಇನ್ನಷ್ಟು ಓದಲಿ ಅಂತ ೪ ಕಿಲೋಮೀಟರ್ ದೂರದ ಸಂಪಿಗೆಹಳ್ಳಿಗೆ ಸೇರಿಸಿದ್ದರಿಂದ ನಾನು ಅಣ್ಣ ಒಟ್ಟಿಗೆ ಹೋಗುತ್ತಿದ್ದೆವು. ಬೇಲಿ ದಾಟಿ ಬಂಡೆ ಹತ್ತಿ ಕಲ್ಲು ಮುಳ್ಳಿನ ದಾರಿಯಾಗಿದ್ದರೂ ಹೆಂಗೊ ಎಂಟನೆ ಕ್ಲಾಸ್ ಮುಗಿಸಿದೆ. ಅಣ್ಣ ಹತ್ತನೇ ಕ್ಲಾಸ್ ಪಾಸ್ ಮಾಡಿ ಇನ್ನು ಓದಬೇಕೆಂದನು. ನನ್ನ ಚಿಕ್ಕಮ್ಮನಿಗೆ ನಮ್ಮನ್ನು ಓದಿಸಲು ಇಷ್ಟವಿಲ್ಲದೆ ಇಬ್ಬರು ಓದಿ ಯಾವ ಸಾಮ್ರಾಜ್ಯ ಆಳಬೇಕು ಮನೇಲಿ ಚಾಕ್ರಿ ಯಾರ್ ಮಾಡ್ತಾರೆ ಅಂತ ದಿನ ಬೈಯುತ್ತಿದ್ದರು. ಅಣ್ಣ ಮುಂದೆ ಓದಲೇಬೇಕೆಂದು ಬೆಂಗಳೂರಲ್ಲಿ ಅಮ್ಮನ ದೂರದ ನೆಂಟರ ಮನೆ ಸೇರಿದ. ನಾನೊಬ್ಬಳೆ ಶಾಲೆಗೆ ನಡೆದು ಹೋಗುತ್ತಿದ್ದೆ. ಅಣ್ಣನಿದ್ದಾಗ ಅಷ್ಟು ಕಷ್ಟ ಆಗುತ್ತಿರಲಿಲ್ಲ ಈಗ ಕಾಲಿಗೆ ಚಪ್ಪಲಿ ಬೇಕೆನಿಸುತ್ತಿತ್ತು. ನಾನು ದೊಡ್ಡವಳ್ಳಾಗಿದ್ದೀನಿ ಅಂತನೊ ಎನೊ ಕೆಲವು ಹುಡುಗರು ದಾರಿಲಿ ಕೀಟಲೆ ಮಾಡಲು ಶುರು ಮಾಡಿದ್ರು. ಇಷ್ಟು ಸಾಕಿತ್ತು ಚಿಕ್ಕಮ್ಮನಿಗೆ ನನ್ನನ್ನು ಶಾಲೆಯಿಂದ ಬಿಡಿಸಲು. ಅಪ್ಪನಿಗೆ ಹೇಳಿ ಶಾಲೆ ಬಿಡಿಸಿ ಮನೆ ಕೆಲಸಕ್ಕೆ ಹಾಕಿಕೊಂಡಳು.

ಮನೆ ಕೆಲ್ಸದ ಜೊತೆ ತೋಟದ ಕೆಲ್ಸ, ಹಸು ಮೇಯಿಸೊದು, ಎಲ್ಲಾ ಕಲಿತೆ. ಹಿಂಗೆ ಐದಾರು ವರ್ಷ ಕಳೆದವು. ಅಣ್ಣ ಡಿಪ್ಲೋಮಾ ಮುಗಿಸಿ ಬೆಂಗಳೂರಲ್ಲೆ ನೌಕರಿ ಹಿಡ್ಕೊಂಡ. ಮೊದಲು ತಿಂಗಳಿಗೊಮ್ಮೆ ಬರುತ್ತಿದ್ದವ ಈಗ ಆರು ತಿಂಗಳಿಗೊಮ್ಮೆ ಮುಖ ತೋರಿಸೋಕೆ ಶುರು ಮಾಡಿದ. ನನ್ನ ಕಷ್ಟಕ್ಕೆ ಸ್ಪಂಧಿಸುತ್ತಿದ್ದ ಅವನೊಬ್ಬನು ಸಹ ಈಗ ಅಪರೂಪ ಆಗಿಬಿಟ್ಟ. ಅಪ್ಪ ಚಿಕ್ಕಮ್ಮನ ಮಾತು ಮೀರುತ್ತಿರಲಿಲ್ಲ. ಮನೆಕೆಲಸ ಎಲ್ಲ ನನ್ನ ಮೇಲೆ ಎರುತ್ತಿದ್ದಳು. ನನ್ನ ವಯಸ್ಸಿನವರಿಗೆಲ್ಲಾ ಊರಲ್ಲಿ ಮದುವೆಯಾಗಿ ಬಾಣಂತನಕ್ಕೆಂದು ತವರಿಗೆ ಬಂದ್ದಿದರು. ನನ್ನ ಮದುವೆ ಬಗೆ ಯಾರು ಯೋಚಿಸಿರಲಿಲ್ಲ. ಈ ಸಲ ಅಣ್ಣ ಊರಿಗೆ ಬಂದಾಗ ನಿನಗೊಂದು ಗಂಡು ನೋಡ್ತೀನಿ. ಅಪ್ಪ ಚಿಕ್ಕಮ್ಮ ಹೇಳುವ ತನಕ ನಿನ್ಗೆ ಮದುವೆ ಮಾಡೊಲ್ಲ ಅಂದ.

ಒಂದು ಭಾನುವಾರ ಬೆಂಗಳೂರಿನಿಂದ ಅವನ ಸ್ನೇಹಿತನನ್ನು ಕರೆತಂದು ನನಗೆ ಸ್ವಲ್ಪ ಅಲಂಕಾರ ಮಾಡಿಕೊಳ್ಳಲು ಹೇಳಿದ. ದೇವರು ನನಗೆ ಎಲ್ಲ ಕಿತ್ತು ಕೊಂಡರೂ ಸ್ವಲ್ಪ ಸೌಂದರ್ಯ ಕೊಟ್ಟಿದ್ರಿಂದನೋ ಎನೋ ಅಣ್ಣನ ಸ್ನೇಹಿತ ರವಿ ನನ್ನ ಮೆಚ್ಚಿಕೊಂಡರು. ನೀನು ಭೂಮಿ ಅವನು ರವಿ, ನಿನಗೆ ಬೆಳಕು ಕೋಡ್ತಾನೆ ಅಂತೇಳಿ ಮದುವೆ ತಯಾರಿ ಮಾಡೆ ಬಿಟ್ಟ. ಚಿಕ್ಕಮ್ಮನಿಗೆ ಮನೆಕೆಲ್ಸಕ್ಕೆ ಮಾತ್ರ ತೊಂದರೆ ಆದರೂ ಹೆಂಗೊ ಇವಳನ್ನ ಸಾಗಿ ಹಾಕಿದ್ರೆ ಸಾಕು ಅನ್ನಿಸಿತ್ತು.

ರವಿಗೆ ತಂದೆ ಇರಲಿಲ್ಲ. ಅಮ್ಮ ಮತ್ತು ತಂಗಿ ಸುಜಾತ. ತಂಗಿ ಮದುವೆ ಮಾಡಿ ಮನೆ ಜವಬ್ದಾರಿ ಅವರೆ ಹೊತ್ತಿದ್ದರು. ನನ್ನ ಅಣ್ಣ ರವಿ ಹತ್ತಿರ ನಾನು ಪಿ.ಯು.ಸಿ ಓದಿದ್ದೀನಿ ಅಂತೇಳಿ ಅವರ ಮನೆಯವರನ್ನೆಲ್ಲಾ ಒಪ್ಪಿಸಿದ್ದ. ಕೊರಳಿಗೆ ಮಾಂಗಲ್ಯ ಬಂದೆ ಬಿಟ್ಟಾಗ ಭಯ ಶುರುವಾಯಿತು. ಅಪ್ಪ ಚಿಕ್ಕಮ್ಮನಿಗೆ ನಮಸ್ಕರಿಸಿ, ತಂಗಿ ತಮ್ಮ ಇಬ್ಬರಿಗೂ ಮುತ್ತಿಟ್ಟು ಗಂಡನ ಮನೆ ತಲುಪಿದೆ. ಬೆಂಗಳೂರಿನ ಜೀವನ ನನಗೆ ಹೊಸದು. ಅತ್ತೆ ನನ್ನ ಸೊಸೆ ತರ ನೋಡಲೆ ಇಲ್ಲ. ಸುಜಾತ ಗಂಡನ ಮನೆಗೆ ಹೋದ ಮೇಲೆ ನನ್ನನ್ನೆ ಮಗಳೆಂದು ಭಾವಿಸಿದ್ದರು. ನನಗೆ ತಾಯಿ ಪ್ರೀತಿ ಅಲ್ಲಿ ಸಿಕ್ಕಿ ಹಿಗ್ಗಿ ಹೋಗಿದ್ದೆ.

ದಿನ ಕಳೆದಂತೆ ರವಿಗೆ ನಾನು ಹೆಚ್ಚು ಓದಿಲ್ಲ ಅಂತ ತಿಳಿದು ನನ್ನ ಮೇಲೆ ಸ್ವಲ್ಪ ಬೇಸರ ಆದರೂ ಅತ್ತೆಗೆ ಏನೂ ಅನ್ನಿಸಲಿಲ್ಲ. ಅವರು ನಿವೃತ್ತ ಶಿಕ್ಷಕಿ ಯಾದ್ದರಿಂದ ಪರವಾಗಿಲ್ಲ ಬಿಡಮ್ಮ ಅಂತೇಳಿ ಅವರೇ ಕೆಲವು ಇಂಗ್ಲೀಷ್ ಪದಗಳನ್ನು ಹೇಳಿಕೊಟ್ಟು ಕಲಿಸಿದರು. ತಾಯಿ ಪ್ರೀತಿ ಸಿಕ್ಕ ಕೆಲದಿನಗಳ ನಂತರ ನಾನು ತಾಯಿಯಾಗುವ ಭಾಗ್ಯ ಬಂತು. ನನ್ನವರಿಗೆ ಸಂಸಾರ ಕಷ್ಟ ಅನ್ನಿಸಿತೊ ಎನೋ, ತಂಗಿ ಮದುವೆಯ ಸಾಲಗಳನ್ನು ತೀರಿಸಲೊ ಎನೋ, ವಿದೇಶಕ್ಕೆ ಹೋಗಿ ದುಡಿಯುವ ಆಸೆ ಚಿಗುರಿ ಮೂರು ತಿಂಗಳ ಗರ್ಭಿಣಿಯನ್ನು ಬಿಟ್ಟು ದೂರದ ದುಬೈಗೆ ವಿಮಾನ ಹತ್ತಿದರು. ಅಪ್ಪನಿಗೆ ನನ್ನ ನೆನಪಾದರೂ ಚಿಕ್ಕಮ್ಮನ ಅನುಮತಿ ಇಲ್ಲದೆ ಬರುವ ಆಗಿರಲಿಲ್ಲ. ಅಣ್ಣ ಒಂದೆರಡು ಸಲ ಬಂದು ಹೋಗಿದ್ದ. ಅಣ್ಣ ನನ್ನ ಗಂಡನ ಸ್ನೇಹಿತನಾದ್ದರಿಂದ ಅತ್ತೆಗೆ ಚೆನ್ನಾಗಿ ಪರಿಚಯವಿದ್ದು ಬೇಸರವಾದಾಗ ಅಣ್ಣನ ಜೊತೆ ಮಾತಾಡು ಅಂತ ಅತ್ತೆಯೇ ಫೋನ್ ಮಾಡಿಕೊಡುತ್ತಿದ್ದರು. ಒಂದಿನ ಅಣ್ಣ ತನ್ನ ಮದುವೆಯ ಪತ್ರಿಕೆಯೊಂದಿಗೆ ಬಂದಾಗ ನನ್ನಷ್ಟೇ ಅತ್ತೆಗೂ ಗಾಬರಿಯಾಯ್ತು. ತನ್ನ ಅಫೀಸಲ್ಲೆ ಕೆಲಸ ಮಾಡುವ ಹುಡುಗಿ, ಅವರ ಮನೆಯಲ್ಲೆ ಅಳಿಯನಾಗಿರಬೇಕೆಂದಿದ್ದಾರೆ ಅಂದ. ಅಣ್ಣನ ಮದುವೆಯಲ್ಲೆ ಅಪ್ಪ, ಚಿಕ್ಕಮ್ಮ, ತಂಗಿ, ತಮ್ಮ ಎಲ್ಲರನ್ನು ನೋಡಿದೆ. ನನ್ನವರು ಮದುವೆಗೂ ಬರಲು ಆಗಲಿಲ್ಲ. ಆಗೊಮ್ಮೆ ಹೀಗೊಮ್ಮೆ ಫೋನ್ ಮಾಡುತ್ತಿದ್ದರು. ಅಪ್ಪನಿಗೆ ನಾನು ಗರ್ಭಿಣಿ ಅಂತ ಗೊತ್ತದರೂ ಎನೂ ಕೇಳಲಿಲ್ಲ. ಚಿಕ್ಕಮ್ಮ ನನಗ್ಯಾಕೆ ಅಂತ ನನ್ನ ಆರೋಗ್ಯ ಸಹ ವಿಚಾರಿಸಲಿಲ್ಲ. ಕರುಳ ಕುಡಿ ಹೊರ ಜಗತ್ತು ಕಾಣಲು ಕಣ್ಣು ಬಿಟ್ಟಿತು. ನನಗೆ ಬೇಕಾದುದ್ದನ್ನು ಅತ್ತೆ ತಂದು ಕೊಟ್ಟು ಮೊಮ್ಮಗಳನ್ನು ಆಡಿಸುತ್ತಿದ್ದರು. ಮಾಸಗಳು ಉರುಳಿದಂತೆ ನನ್ನವರ ಸಂಪರ್ಕ ಕಡಿಮೆ ಆಗ್ತಾ ಬಂತು.

ಒಂದಿನ ಸುಜಾತ ಗಂಟು ಮೂಟೆ ಕಟ್ಟಿಕೊಂಡು ಮಗಳ ಜೊತೆ ಮನೆಗೆ ಬಂದು, ತನ್ನ ಗಂಡ ಸರಿ ಇಲ್ಲ, ದಿನ ಕುಡಿದು ಬಂದು ಬಡಿತಾನೆ, ನಾನು ಇನ್ಮೇಲೆ ಅಲ್ಲಿಗೆ ಹೋಗಲ್ಲ ಅಂತೇಳಿ ಇಲ್ಲೆ ಉಳಿದಳು. ಅತ್ತೆಗೆ ಯೋಚನೆ ಶುರುವಾಗಿ ಆರೋಗ್ಯ ಏರುಪೇರಾಗುತ್ತಿತ್ತು. ಮನೆಯ ಖರ್ಚೆಲ್ಲಾ ಅವರ ಪಿಂಚಣಿಯಿಂದಲೆ ನಡೆಯುತ್ತಿದ್ದರೂ ಮಗ ಇಲ್ಲದ್ದರಿಂದ ಮಗಳೆ ಮನೆಯ ಅಧಿಕಾರ ಹಿಡಿಯಲಾರಂಭಿಸಿದಳು. ನನ್ನವರು ಹಣ ಕಳಿಸುತ್ತಿರಲಿಲ್ಲ. ತಂಗಿಯ ಮದುವೆ ಸಾಲ ತೀರಿಸುತ್ತಿದ್ದರಿಂದ ನಾನು ಎನೂ ಕೇಳುತ್ತಿರಲಿಲ್ಲ.

ಒಂದು ಮುಂಜಾನೆ ರವಿ ದುಬೈನಲ್ಲಿ ಅಪಘಾತಕೀಡಾಗಿ ಕೊನೆಯುಸಿರೆಳೆದರು ಅನ್ನೋ ಫೋನಿನ ಸುದ್ದಿ ಬೆಚ್ಚಿ ಬೀಳಿಸಿತು. ನಾನು ಅತ್ತೆ ದಿಗ್ ಭ್ರಮೆಗೊಂಡು ದಿಕ್ಕು ತೋಚದಂತಾಯಿತು. ಕಾಲು ಸ್ವಾಧೀನ ಕಳೆದುಕೊಂಡು ಕಣ್ಣು ಮೈಯಲ್ಲಿದ್ದ ನೀರನ್ನೆಲ್ಲಾ ಹೊರ ಹಾಕಿತು. ಆರು ದಿನಗಳಾದ ಮೇಲೆ ಪೆಟ್ಟಿಯಲ್ಲಿ ಮಲಗಿದ್ದ ಅವರ ಪಾರ್ಥಿವ ಶರೀರ ಮನೆ ತಲುಪಿದಾಗ ಎನೂ ಅರಿಯದ ನನ್ನ ಮಗಳು ಅಪ್ಪನನ್ನು ಮಾತನಾಡಿಸುತ್ತಿದ್ದಳು. ಅಣ್ಣ ಬಂದು ಎಲ್ಲಾ ಕಾರ್ಯ ಮುಗಿಸಿ ಹೊರಟನು. ಒಂದೆರಡು ದಿನ ಮನೆಗೆ ಬಾ ಅಂತ ಕರೆದರೂ ಅತ್ತೆಯನ್ನು ಬಿಟ್ಟು ನಾನೆಲ್ಲೂ ಹೋಗಲಿಲ್ಲ. ನನ್ನ ಪಾಲಿನ ರವಿ ನನಗಿಲ್ಲದಿದ್ದರೂ ಆಕಾಶದಲ್ಲಿ ದಿನ ಬಂದು ಹೋಗುತ್ತಿದ್ದ. ಅತ್ತೆ ಕೊರಗಿ ಕೊರಗಿ ಹಾಸಿಗೆಯಲ್ಲೆ ಕೊನೆಯುಸಿರೆಳೆದಾಗ ನಾನಿನ್ನು ಕುಸಿದೆ. ಮನೆಗೆ ಗಂಡು ದಿಕ್ಕು ಇಲ್ಲದಂತಾಯಿತು. ಅತ್ತೆಗೆ ಬರುತ್ತಿದ್ದ ಪಿಂಚಣಿ ನಿಂತು ಹೋದಾಗ ನಾನು ಮಗಳನ್ನು ಮನೆಯಲ್ಲೆ ಬಿಟ್ಟು ಹತ್ತಿರವಿದ್ದ ಗಾರ್ಮೆಂಟ್ಸ್ ಗೆ ಸೇರಿದೆ. ಹಸಿವು ನನಗೆ ಕೆಲಸ ಕಲಿಸ ತೊಡಗಿತು. ಸುಜಾತ ತನ್ನ ಮಗಳೊಂದಿಗೆ ನನ್ನೊಂದಿಗೆಯೇ ಇದ್ದಳು. ಅವಳು ಸ್ವಲ್ಪ ಓದಿದ್ದರಿಂದ ಆಫೀಸ್ ಕೆಲಸ ಗಿಟ್ಟಿಸಲೇನು ಹೆಚ್ಚು ಸಮಯ ಬೇಕಿರಲಿಲ್ಲ. ಅವಳು ಸಹ ಮಗಳನ್ನು ಮನೆಯಲ್ಲೆ ಬಿಟ್ಟು ದುಡಿಯಲಾರಂಭಿಸಿದಳು.

ಅತ್ತೆ ಶಿಕ್ಷಕಿ ವೃತ್ತಿಯಿಂದ ಕೂಡಿಟ್ಟ ಹಣ ಮತ್ತು ನಿವೃತ್ತಿಯಾದಾಗ ಬಂದ ಹಣದಿಂದ ಮನೆ ಕೊಂಡು ಕೊಂಡಿದ್ದರಿಂದ ಸಧ್ಯ ಮನೆ ಬಾಡಿಗೆ ಕಟ್ಟುವ ಆಗಿಲ್ಲ ಅಂತ ದೇವರಿಗೆ ಕೈ ಮುಗಿಯುತ್ತಿದ್ದೆ. ದಿನಕಳೆದಂತೆ ಸುಜಾತ ಬದಲಾಗುತ್ತ ಹೋದಳು. ಮಗಳ ಮೇಲಿನ ಕಾಳಜಿ ಕಮ್ಮಿಯಾಗಿ ಸಂಜೆ ತಡವಾಗಿ ಬರುತ್ತಿದ್ದಳು. ಅವಳ ಆಫೀಸಿನ ಯುವಕ ನಾಗರಾಜ್ ಆಗಾಗ ಅವಳನ್ನು ಮನೆಗೆ ಬಿಡುತ್ತಿದ್ದವನು ಈಗ ಮನೆಗೆ ಬಂದು ಹೆಚ್ಚು ಸಮಯ ಇಲ್ಲೆ ಕಳೆಯಲು ಶುರು ಮಾಡಿದ. ನನಗೆ ಕಸಿವಿಸಿ ಆಗಿ ಒಂದೆರಡು ಬುದ್ಧಿಮಾತು ಹೇಳಿದರೂ ಅವಳು ಕೇಳುವ ಸ್ಥಿತಿಯಲಿರಲಿಲ್ಲ. ಅವಳ ಮಗಳು ಸ್ವಾತಿ ಸಹ ನನ್ನ ಮಗಳೊಂದಿಗೆ ಆಟ ಆಡುತ್ತ ಬೆರೆತು ಹೋಗಿದ್ದಳು.

ಕೆಲ ದಿನಗಳ ನಂತರ ಮಾತುಗಳು ಬದಲಾಗಿ ಅವಳ ಮನೆಯಲ್ಲಿ ನಾನು ಅವಳಿಗೆ ಭಾರವಾಗಿರುವ ತರಹ ನಡೆದುಕೊಳ್ಳಲಾರಂಬಿಸಿದಳು. ಕೆಂಡವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಲಾಗದಂತೆ ನಾವಿರುವ ಮನೆ ತನ್ನದೆ ಎಂದು ಕಾಗದ ಪತ್ರಗಳನ್ನು ತೋರಿಸಿದಳು. ಅಷ್ಟೊಂದು ಅರಿವು ಇಲ್ಲದ ನಾನು ಅದನ್ನೆಲ್ಲ ಪರೀಕ್ಷಿಸಲಿಲ್ಲ. ಅತ್ತೆ ಇವಳ ಹೆಸರಿಗೆ ಬರೆದು ಕೊಟ್ಟಿದರೊ ಅಥವಾ ಇವಳೆ ಅತ್ತೆಯ ಸಹಿ ಮಾಡಿದ್ದಳೊ ನನಗೆ ಗೊತ್ತಿರಲಿಲ್ಲ. ಅವಳ ಸ್ನೇಹಿತ ನಾಗರಾಜನೊಂದಿಗೆ ಅವಳು ಇರುವುದಾಗಿ ಹೇಳಿದಾಗ ನಾನು ಮನೆ ಬಿಟ್ಟು ಹೊರಗಡೆ ಬಂದೆ. ಮಗಳ ಜೊತೆ ಹೊರಟಾಗ ಸ್ವಾತಿ ಸಹ ನನ್ನ ಮಗಳ ಜೊತೆ ಬರುತ್ತೀನಿ ಅಂತ ಹಠ ಹಿಡಿದಳು. ನಾಗರಾಜನಿಗೆ ಆ ಮಗು ಅಷ್ಟು ಇಷ್ಟವಿಲ್ಲದ ಕಾರಣಕ್ಕೊ ಎನೋ ಸುಜಾತ ಸ್ವಾತಿಯನ್ನು ತಡೆಯದೆ ಇದ್ದಾಗ ನಾನು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಬಂದೆ.

ಅಣ್ಣನ ಮನೆಗೆ ಹೋಗಲು ಮನಸಾಗದೆ ಬೃಹತ್ ಬೆಂಗಳೂರಲ್ಲಿ ಆಶ್ರಯ ಕಷ್ಟವಾಯಿತು. ಹಣವಿಲ್ಲದೆ ಗಾರ್ಮೆಂಟ್ಸ್ ನಲ್ಲಿ ಸೆಕ್ಯುರಿಟಿಗೆ ಬೇಡಿಕೊಂಡು ಕೆಲದಿನ ಜನರೇಟರ್ ರೂಮಿನಲ್ಲೆ ವಾಸ ಮಾಡಿದೆ. ಸ್ವಲ್ಪ ಸಾಲ ಮಾಡಿ ಒಂದು ಬಾಡಿಗೆ ಮನೆ ಪಡೆದು ಈಗ ನಿಟ್ಟುಸಿರು ಬಿಡುತ್ತಿರುವಾಗ ಇನ್ನೊಂದು ಆತಂಕ ಶುರುವಾಯಿತು. ನಾನು ಜನರೇಟರ್ ರೂಮಿನಲ್ಲಿದ್ದ ವಿಷಯ ತಿಳಿದ ನನ್ನ ಸೂಪರ್ ವೈಸರ್ ಚಂದ್ರು ಕರೆದು ಕೇಳಿದಾಗ ನನ್ನ ಕಥೆ ಹೇಳಿದೆ. ಅವರಿಗೆ ಎನನಿಸಿತೊ ಗೊತ್ತಿಲ್ಲ, ಮರುದಿನ ನನ್ನ ಮದುವೆಯಾಗುವುದಾಗಿ ಹೇಳಿ ಒಪ್ಪಿಗೆ ಕೇಳಿದರು. ನನಗೆ ಮತ್ತೆ ಆಕಾಶ ಕಳಚಿ ಬಿದ್ದಂತಾಯಿತು. ಯೋಚಿಸಲು ಸಮಯ ಬೇಕೆಂದು ಹೊರಬಂದೆ. ರವಿಯನ್ನು ಕಳೆದು ಕೊಂಡ ಭೂಮಿಗೆ ಚಂದ್ರ ಬೆಳಕು ಕೊಡುತ್ತಾನೆಯೇ....ನನ್ನ ನಂಬಿರುವ ಎರಡು ಮಕ್ಕಳನ್ನು ಸ್ವೀಕರಿಸುವನೇ....ನಂಬಿ ಹೋಗಲೆ...? ಮನಸ್ಸು ಒಪ್ಪುತ್ತಿಲ್ಲ .... ನೀವೆ ಹೇಳಿ...








ಬುಧವಾರ, ಆಗಸ್ಟ್ 15, 2012

ಹ(ಅ)ವಳ





ನಲ್ಲೆ,

ನೀನೆ ಬೇಕೆಂದೆ

ಮುತ್ತು, ರತ್ನ, ಹವಳ....

ರತ್ನ ಸಿಗಲಿಲ್ಲ

ಮುತ್ತು ಅವಳಲ್ಲೆ ಇಹುದು

ಎಂದು ತಂದೆ ಅವಳ....   

       

ಶುಕ್ರವಾರ, ಜುಲೈ 27, 2012

ಪರಿಮಳ




ನಲ್ಲೆ ನೀನಿಲ್ಲದಾಗ
ಮನೆ ಸ್ವಚ್ಚವಿರೊಲ್ಲವೆಂದು
ಪಡೆಯದಿರು ಕಳವಳ....

ನೀನಿಲ್ಲದಿದ್ದರೂ
ಮನೆಯಲ್ಲೀಗ ಸದಾ
ತುಂಬಿರುವುದು ಪರಿಮಳ.....





ಭಾನುವಾರ, ಮಾರ್ಚ್ 11, 2012

ಶುಕ್ರವಾರ, ಜನವರಿ 20, 2012

ಅರ್ಪಣೆ

ನನ್ನ ಬದುಕಿನಲ್ಲಿ ಹೊಸ ಮಜಲುಗಳನ್ನೇ ಸೃಷ್ಟಿಸಿದ ನನ್ನ ಬಾಳ ಸಂಗಾತಿಗೆ...


ಮೃದುವಾದ ಮನಸು
ಹೂವಿನಂತ ಬೆಡಗು
ಕಪಟವಿಲ್ಲದ ಗು
ಕೂಡಿ ಆಗಿರುವೆಯಾ ನೀ ಸುಗುಣ


ನಿಶ್ಕಲ್ಮಶ ಹೃದಯ
ನಡೆನುಡಿ ವಿನಯ
ಯಾರಿಗೂ ಮಾಡದು ಗಾಯ
ಸನಿಹವಿದ್ದೆಡೆ ನೋವು ಮಂಗಮಾಯ


ಸಾಹಿತ್ಯದಲ್ಲಿ ಆಸಕ್ತಿ
ಗುರುಹಿರಿಯರಲ್ಲಿ ಭಕ್ತಿ
ಇನಿಯನಿಗೆ ತುಂಬಿರುವೆ ಶಕ್ತಿ
ಕಂದನಿಗಾಗಿರುವೆ ಸ್ಪೂರ್ತಿ


ಜಾಣೆಯರಲ್ಲಿ ಜಾಣೆ 
ಸುಂದರ ಗುಣ ಸಂಪನ್ನೆ
ಎನಗೊಲಿದ ಮನದನ್ನೆ
ನಿನಗಿದೊ ಜನುಮದಿನದ ಶುಭಾಶಯ......





ಸೋಮವಾರ, ಡಿಸೆಂಬರ್ 26, 2011

ನಾಯಿಪ್ರೀತಿ





ಸಂಜೆ ಹೊತ್ತಲಿ 
ರಸ್ತೆ ಬದಿಯಲಿ
ನೀ ಕಾಯುತ್ತಿದ್ದ ಕಂಡು 
ನಾ ಪೂರ್ಣ ಮನಸೋತಿದ್ದೆ...


ನಂತರವೇ ತಿಳಿದಿದ್ದು
ನೀ ಕಾದಿದ್ದು 
ಲೈಟ್ ಕಂಬದ ಬಳಿ ಇದ್ದ
ನಿನ್ನ ನಾಯಿಮರಿ ಬರಲೆಂದು...

ಗುರುವಾರ, ಸೆಪ್ಟೆಂಬರ್ 08, 2011

ಸವಾಲು



ಬೇರಿನಿಂದ ಗಟ್ಟಿಯಾಗಿರಲು
ಗಾಳಿ ಹಾಕುವುದು
ಮರಕ್ಕೆ ಸವಾಲು....


ಬಿಯರಿನಿಂದ ಟೈಟಾಗಿರಲು
ಅವನಾಕುತ್ತಾನೆ
ಹೆಂಡತಿಗೆ ಸವಾಲು.....



ಬುಧವಾರ, ಜುಲೈ 20, 2011

ವೆಲ್ಕಮ್ಮು


 
ಕುಡಿದು ಮನೆಗೆ
ಬಂದಾಗ ಮಾತ್ರ
ಹೇಳುತ್ತಾಳವಳು
ವೆಲ್ಕಮ್ಮು....

ಯಾಕಂದ್ರೆ ಮನೆಗೆ
ತಂದಿರೋದ್ರಲ್ಲಿ
ಲಪಟಾಯಿಸುತ್ತಾಳವಳು
ಬೈಟು ರಮ್ಮು.....




ಮಂಗಳವಾರ, ಜುಲೈ 05, 2011

ಬೆಳ್ಳಿ ಕಾಲುಂಗುರ







ಕಪ್ಪನೆ ಮೋಡದೊಳಗೆ
ಮಿನುಗುತಿಹುದು
ಯಾರದೋ ಬೆಳ್ಳಿ ಕಾಲುಂಗುರ....

ಮೋಡ ಸರಿಸಿ
ನೋಡಿದೊಡೆ
ಕಂಡಿದ್ದು ಆ ಬೆಳ್ಳಿ ಚಂದಿರ......

ಎಂತ ಸೊಬಗು ಅವನ ಸೌಂದರ್ಯ
ಸವಿದ ಕಣ್ಣಿಗೇ ಗೊತ್ತು
ಆ ಚಂದ್ರಮನ ಚಿತ್ತಾರ.....





ಬುಧವಾರ, ಜೂನ್ 15, 2011

ಸೋಮವಾರ, ಜೂನ್ 06, 2011

ಗುರುವಾರ, ಮೇ 19, 2011

ಬುಧವಾರ, ಮೇ 11, 2011

ಉಡುಗೊರೆ



ನಲ್ಲೆ,
ಕೊಡಿಸುವೆ
ನಿನ್ನ ಸೊಂಟಕ್ಕೆ
ಒಂದು ಡಾಬು.....


ಅದರ ಮೊದಲು
ಕರಗಿಸುವೆಯಾ
ನಿನ್ನ ಕೊಬ್ಬು....





ಬುಧವಾರ, ಏಪ್ರಿಲ್ 13, 2011

ನಿರೂಪ(ಕಿರಾತ)ಕ



ಅವನು ಪ್ರಸಿದ್ಧ
ವಾಹಿನಿಯಲಿ 
ಕ್ರೈಂ ಸ್ಟೋರಿ
ನಿರೂಪಕ........


ಆದರೆ ಮನೆಯಲಿ
ಹೆಂಡತಿಯ ಪಾಲಿಗೆ
ಕಿರಾತಕ......




ಬುಧವಾರ, ಮಾರ್ಚ್ 30, 2011

ಲಂಚ



ಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....



ಸೋಮವಾರ, ಮಾರ್ಚ್ 21, 2011

ಕಣ್ಣೀರು



"ನಿನ್ನ ಕಣ್ಣೀರ ಒರೆಸುವ
ಕೈ ನಾನಾಗಬೇಕು......"


"ನನ್ನಲ್ಲಿ ಕರವಸ್ತ್ರ ಇರುವಾಗ
ನಿನ್ನ ಕೈ ಏಕೆ ಬೇಕು......"





ಮಂಗಳವಾರ, ಮಾರ್ಚ್ 01, 2011

ಮಂಗಳವಾರ, ಫೆಬ್ರವರಿ 22, 2011

ಬಿಟ್ಟಿರಲಾರೆ



ನಾನೆಂದೂ
ಇರಲಾರೆ
ನಿನ್ನ ಬಿಟ್ಟು.....


ಯಾಕೆಂದ್ರೆ
ನಿನ್ನೆಸರಿನಲ್ಲೇ
ಇರುವುದು ನಿಮ್ಮಪ್ಪನ
ಫ್ಲ್ಯಾಟು -ಸೈಟು......



ಮಂಗಳವಾರ, ಫೆಬ್ರವರಿ 01, 2011

ಹೆಸರು



ನನ್ನ ಬಿಟ್ಟು
ನಿನ್ನ ತಂಟೆಗ್ಯಾರು
ಬರದಿರಲು
ಕಾರಣ
ಆ ನಿನ್ನ 
ಮುದ್ದಾದ ಹೆಸರು
"ಚಾಮುಂಡಿ ...!!!!!"





ಬುಧವಾರ, ಜನವರಿ 05, 2011

ಸೋಮವಾರ, ಡಿಸೆಂಬರ್ 13, 2010

ಏಕೆ....??



ವಾಕಿಂಗ್ ಮಾಡಲು
ಮುದ್ದಾದ ನಾಯಿ
ಬೇಕೆಂದಳು ಅವನಾಕೆ....

ಅವನಂದನು
ನಾ ನಿನ್ನೊಂದಿಗೆ
ಇರುವಾಗ ಅದಿನ್ಯಾಕೆ....


ಬುಧವಾರ, ನವೆಂಬರ್ 17, 2010

ಪ್ರತಿಭಾ



ನೀ ಹೇಳಿದೆ 

ಬುದ್ಧಿ ಇರುವವರು  

ಬುದ್ಧಿವಂತರು ಎಂದು...



  ಈಗೇಳು, ನೀ


     ನನ್ನೊಂದಿಗಿದ್ರೆ
     
  ನಾ ಪ್ರತಿಭಾವಂತನಲ್ಲವೇ...?



ಸೋಮವಾರ, ಅಕ್ಟೋಬರ್ 25, 2010

ನೆನೆದು



ನೀರಿನಲ್ಲಿ 
ನೆನೆದು ನೆನೆದು
ಕಲ್ಲು ಕರಗಲೇ ಇಲ್ಲಾ ....


ಮನದಲ್ಲೇ 
ನಿನ್ನ ನೆನೆದು
ಕರಗಿ ಹೋದೆನಲ್ಲಾ ....



ಬುಧವಾರ, ಅಕ್ಟೋಬರ್ 06, 2010

ಪ್ರಿಯ



ನೀ ನನ್ನ 
ಕರೆದಾಗಲೆಲ್ಲಾ
"ಪ್ರಿಯ... ಪ್ರಿಯ"...


ನೆನಪಾಗ್ತಾಳೆ
 ನನ್ನ ಕಾಲೇಜಿನ 
  ಆ  "ಪ್ರಿಯ"...




ಸೋಮವಾರ, ಸೆಪ್ಟೆಂಬರ್ 20, 2010

ತರಲೆ



ನಲ್ಲ, ನೀ ಹೇಳುತ್ತಿದ್ದೆ
ಯಾವಾಗಲೂ 
ಮುತ್ತು ತರಲೆ ಎಂದು....


ನೀ ಕೊಟ್ಟ ಮೇಲೆ
ತಿಳಿಯಿತು 
ನೀ ಬಲು ತರಲೆ ಎಂದು.....







ಮಂಗಳವಾರ, ಆಗಸ್ಟ್ 10, 2010

ಬೆಳಗು



ಮನೆಯನ್ನು ಬೆಳೆಗಲು
ಮಡದಿಯನ್ನು ತಂದನು....


ಅವಳ ಜೊತೆಗೀಗಾ
ಅವನು ಬೆಳಗುತ್ತಿರುವನು
ಪಾತ್ರೆಯನ್ನು.....





ಮಂಗಳವಾರ, ಜುಲೈ 06, 2010

ರಂಭೆ



ಬೀಳುವಂತಾದರೆ
ರಂಭೆಯನ್ನು
ಹಿಡಿದುಕೊ ಅಂದಳು....


ಬೀಳುವ ನೆಪವನೊಡ್ಡಿ
ಆ ರಂಭೆಯನ್ನು 
ಹಿಡಿದುಕೊಂಡೇ ಬಿಟ್ಟನು....





ಬುಧವಾರ, ಜೂನ್ 16, 2010

ಅಂದ - ಚೆಂದ



ಪದ ಪುಂಜಗಳು
ಸಾಲಲಿಲ್ಲ ಬಣ್ಣಿಸಲು
ಅವಳ ಅಂದ ಚೆಂದ....


ಪಕ್ಕದಲ್ಲಿ ನಿಲ್ಲಲು
ಬಿಡಲಿಲ್ಲ ಅವಳ
ಬಾಯಿಯ ದುರ್ಗಂಧ....





ಮಂಗಳವಾರ, ಜೂನ್ 01, 2010

ಹೆಲ್ಮೆಟ್ಟು




ಪಲ್ಸರಿನಲ್ಲೆ ಪಾರ್ಕಿಗೋಗಲು

ಪದ್ದು ಹಿಡಿದಳು ಪಟ್ಟು.....


ಪಕ್ಕದಲ್ಲಿ ಇದ್ದದ್ದು


ತರ್ಕಾರಿ ಮಾರ್ಕೆಟ್ಟು....


ಎದುರಲ್ಲಿ ಬಂದವಳಿಗೂ


ನನ್ನಾಕೆಗೂ ಸ್ನೇಹದ ನಂಟು....


ಅವಳ್ಕಣ್ಣ ತಪ್ಸಿದ್ದು


ನನ್ ಕೂಲಿಂಗ್ಲಾಸು ಹೆಲ್ಮೆಟ್ಟು.....





ಸೋಮವಾರ, ಮೇ 10, 2010

ನನ್ ಪ್ರೀತಿ





ನನ್ ಪ್ರೀತಿ

ಹೂವಿನ ತರಹ
ಬಾಡುವುದಿಲ್ಲ....


ಮಂಜಿನ ತರಹ
ಕರಗುವುದಿಲ್ಲ.....


ಗಾಜಿನ ತರಹ 
ಒಡೆಯೊವುದಿಲ್ಲ.....


ನೀ ನನ್ನ ಪ್ರೀತಿಸದಿದ್ದರೆ
ಬೇರೆಯವರಿಗೆ ರವಾನೆಯಾಗುತ್ತಷ್ಟೇ......




ಮಂಗಳವಾರ, ಮಾರ್ಚ್ 23, 2010

ಮಂಗಳವಾರ, ಮಾರ್ಚ್ 09, 2010

ಮುನಿಸು



ಬಿಟ್ಟುಬಿಡು ನಲ್ಲೆ 
ಮನದೊಳಗಿನ ಮುನಿಸು....


ಅವಳು ಬಂದು
ಹೋದದ್ದೆಲ್ಲಾ ಬರೀ ಕನಸು....


ಇದಕೇಕೆ ಹಾಳು ಮಾಡುವೆ 
ನಿನ್ನ ಮೊಗದ ಸೊಗಸು .....



ಮಂಗಳವಾರ, ಫೆಬ್ರವರಿ 23, 2010

ಕವನ-ಹರ್ಷ



ಕವನ ಬರೆಯಲೆಂದು
ಹೋದೆ ಕಡಲತೀರಕಂದು...


ಹೆಗಲಿಗೊಂದು ಬ್ಯಾಗು
ಒಳಗೆ ಕಾಫಿ ಮಗ್ಗು...


ಬರೆದು ಬರೆದು
ಹಾಳೆಯ ಹರಿದು....


ಸುತ್ತಲು ಮೂಡಿತು ರಾಶಿ
ಯಾವುದೂ ತರಲಿಲ್ಲ ಖುಷಿ....


ಕಾಫಿಯ ಕುಡಿದು
ಹಕ್ಕಿಗಳ ಬಣ್ಣ ಸವಿದು....


ಮರಳಿ ಬಂದೆನು ಮನೆಗೆ
ಕವನ ಹೊಳೆಯಲಿಲ್ಲ ಮನಸಿಗೆ....



ಕೊನೆಗೆ ಮನೆಯಲಿ ಬರೆದೆ ನಿಮಿಷದಲಿ
ಮನವು ತುಂಬಿತು ಹರ್ಷದಲಿ....












ಬುಧವಾರ, ಫೆಬ್ರವರಿ 03, 2010

ದಿನಾ(ಬಾ)ರು







ಕುವೈತಿನಲ್ಲಿ ಕಣ್ಣಿಗೆ 


ಕಾಣಸಿಗದು ಬಾರು.....



ಅದಕ್ಕೆ ಜೇಬಲ್ಲಿ 


ಉಳಿದಿರುವುದು ದಿನಾರು.....


ಇದ್ರಿಂದ  ಪತ್ನಿಯರು 


ಫಜೀತಿಗಳಿಂದಿರುವುದು ಪಾರು......








.