ಮಂಗಳವಾರ, ನವೆಂಬರ್ 12, 2013

ರಾಜ್ಯೋತ್ಸವ

ಸಿದ್ಲಿಂಗು ಫೋನ್ ಬಂತು ಕಳ್ ಮಂಜನಿಗೆ...ಮಂಜು, ನನ್ನ ಆಫೀಸಲೊಬ್ಬ ಸೆಲ್ವ ಅಂತ ಇದ್ದಾನಲ್ಲ, ಅವರ ಊರಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಾರಂತೆ. ಒಂದು ಕಿತ ನಮ್ಮೂರಿಗೆ ಬಂದಿದ್ದಾಗ ನಿಮ್ಮೆಲ್ಲರ ಕಾರ್ಯಕ್ರಮ ನೋಡಿ ಖುಸಿ ಆಗಿ ಈಗ ಅವರ ಊರಲ್ಲಿ ನೀವೆ ಕಾರ್ಯಕ್ರಮ ಕೊಡಬೇಕೆಂದು ಕೇಳಿದ್ದಾನೆ, ನೀವೆಲ್ಲಾ ಸೇರಿ ಏನಾರೂ ಮಾಡ್ರಲಾ ಅಂದ. ಆಯ್ತಣ್ಣೊ ಯಲ್ಲರೂ ಪ್ರಾಕ್ಟೀಸು ಮಾಡ್ತೀವಿ ಅಂತೇಳಿ ಯಲ್ಲರಿಗೂ ಹೇಳಿದ. ಈ ಕಿತ ಹೆಂಗಸರು ಸಹ ಮಾಡಲಿ ಅಂತ ಅವರು ಸಹ ಡ್ಯಾನ್ಸು, ಡೊಳ್ಳು ಕುಣಿತ, ವೀರಗಾಸೆ ಯಲ್ಲ ಪ್ರಾಕ್ಟೀಸು ಮಾಡಿರು.

ರಾಜ್ಯೋತ್ಸವ ಡೇಟ್ ಪಿಕ್ಸ್ ಆಯ್ತು. ಕಳ್ ಮಂಜನಿಗೆ ಸಿದ್ಲಿಂಗು ಪೋನ್ ಬಂತು. ಸೆಲ್ವ ಅವರ ಊರು ಮೆಟ್ಟುಪಾಳ್ಯ ಅಂತ ತಮಿಳುನಾಡಲ್ಲಿ ಕನ್ಲಾ, ಚೆನ್ನೈನಿಂದ ೬೦ ಕಿಲೋಮೀಟರ್ . ಚೆನ್ನೈಗೆ ನೀವೆ ಟಿಕೇಟ್ ತಕ್ಕಂಡು ಹೋದ್ರೆ ಅಲ್ಲಿಂದ ಅವರು ಕರೆದುಕೊಂಡು ಹೋಗ್ತಾರೆ. ಆಮ್ಯಾಕೆ ಅಲ್ಲಿ ಟಿಕೇಟ್ ದುಡ್ಡು ಯಲ್ಲಾ ಕೊಡ್ತಾರಂತೆ. ಅಲ್ಲಿ ಊಟ ತಿಂಡಿ ರೂಮು ಯಲ್ಲಾ ಅವರೆ ನೋಡಿಕೊಂತಾರೆ. ಭಾನುವಾರ ಬೆಳ್ಳಿಗೆ ಕಾರ್ಯಕ್ರಮ. ಶನಿವಾರ ಬೆಳ್ಳಿಗೆ ೮ ಘಂಟೆಗೆ ಚೆನ್ನೈ ಬಸ್ ಸ್ಟಾಂಡಿನಿಂದ ನಿಮ್ಮನ್ನು ಕರೆದುಕೊಂಡು ಹೋಗ್ತಾರೆ. ಬಿಳಿ ಬಣ್ಣದ ಟಿಟಿ ಗಾಡಿ ಬತ್ತದೆ. ನೀವೆಲ್ಲಾ ಶುಕ್ರವಾರ ರಾತ್ರಿನೇ ಹೊರಟು ಬುಡ್ರಿ ಅಂದ ಸಿದ್ಲಿಂಗು.

ಆಯ್ತಣ್ಣೊ ಅಂತ ಕಳ್ ಮಂಜ ಯಲ್ಲರಿಗೂ ಹೇಳಿದ. ಯಲ್ಲರ ಹತ್ತಿರ ನೋಡ್ರಲಾ ನಿಮ್ಮ ಕಾರ್ಯಕ್ರಮನಾ ಹೊರನಾಡಲ್ಲಿ ಮಾಡುಸ್ತ ಇದ್ದೀನಿ. ಖರ್ಚು ಸ್ಯಾನೆ ಬತ್ತದೆ. ಆಮ್ಯಾಕಿಂದ ನೀವು ಪೇಮಸ್ ಆಗ್ತೀರಾ...ಇನ್ನ ಹೆಚ್ಚು ಕಾರ್ಯಕ್ರಮ ಯಲ್ಲಾ ಸಿಗ್ತದೆ...ಈಗ ಖರ್ಚಿಗೆ ಅಂತ ನೀವೆಲ್ಲಾ ನಾಲಕು ಸಾವಿರ ಮತ್ತೆ ಡ್ರಸ್ಸಿಗೆ ಒಂದು ಸಾವಿರ ಯಲ್ಲ ಐದು ಸಾವಿರ ಆಯ್ತದೆ ಅಂತ ಹತ್ತು ಜನಗಳಿಂದ ಐವತ್ತು ಸಾವಿರ ಕಿತ್ತ. ಅದ್ರಾಗೆ ೮ ಜನ ಹೆಂಗಸರು ಇಬ್ಬರು ಗಂಡಸರು ಇದ್ದರು.

ಪಕ್ಕದೂರಲ್ಲಿ ಜಲಗೇರಮ್ಮನ ದೇವಸ್ಥಾನ ಇತ್ತು. ಅಲ್ಲಿ ಹೋಗಿ ಪೂಜಾರಿಗೆ ಐನೂರು ರೂಪಾಯಿ ಕೊಟ್ಟು ಭಕ್ತಾದಿಗಳು ಅಮ್ಮನವರಿಗೆ ಉಡಿಸುವ ಸೀರೆ ಗಳಲ್ಲಿ ಒಂದೆ ತರಹದ ಏಂಟು ಹರಿಶಿಣ ಬಣ್ಣದ ಕೆಂಪು ಬಾರ್ಡರ್ ಸೀರೆ ತಕ್ಕಂಡು ಬಂದ. ಗಂಡಸರಿಗೆ ಒಂದೊಂದು ಹಳದಿ ಜುಬ್ಬ ಕೆಂಪು ಪೈಜಾಮ ತಂದು ಯಲ್ಲರಿಗೂ ಕೊಟ್ಟ. ಯಲ್ಲ ಸೇರಿ ಒಂದು ಸಾವಿರ ಆಯ್ತು. ಶುಕ್ರವಾರ ಯಲ್ಲರನ್ನು ಅದೇ ಡ್ರಸ್ ನಲ್ಲಿ ಬರಬೇಕು ಅಂತ ಹೇಳಿದ್ದ. ಯಲ್ಲರೂ ಬಸ್ ಹತ್ತಿದರು. ನಾವೆಲ್ಲಾ ಕರ್ನಾಟಕ ರಕ್ಷಣ ವೇದಿಕೆಯವರು ಚಳುವಳಿಗೆ ಹೊಂಟಿದ್ದೀವಿ ಅಂತೇಳಿ ಬಡ್ಡಿಮಗ ಬಸ್ಸಿನಲ್ಲೂ ಟಿಕೇಟ್ ತೆಗೆದುಕೊಳ್ಳಲಿಲ್ಲ.


ಹೆಂಗೊ ಬೆಳ್ಳಿಗೆ ಏಳು ಘಂಟೆಗೆ ಚೆನ್ನೈ ತಲುಪಿರು. ಯಲ್ಲರೂ ಅಣ್ಣ ಹೊಟ್ಟೆ ಹಸಿವು ಅಂದರು. ತಡೀರಲಾ ಕಾರ್ಯಕರ್ತರು ಬತ್ತಾರೆ ಅಂತ ತಿಂಡಿನೂ ಕೊಡಿಸಲಿಲ್ಲ. ಅಮ್ಯಾಕೆ ಅವರೆ ಒಂದೊಂದು ದ್ವಾಸೆ ತಿಂದು ಕಳ್ ಮಂಜನಿಗೂ ಒಂದು ದ್ವಾಸೆ ಕೊಡಿಸಿದ್ರು. ಅಣ್ಣೊ ವಿಸರ್ಜನೆ ಅಂದ್ರು...ಕೈನಲ್ಲಿ ಕಲ್ಲು ಹಿಡಿದುಕೊಂಡ್ರೆ ತಡೆದುಕೊಳ್ಳಬಹುದು ಅಂತ ಐಡಿಯಾ ಬ್ಯಾರೆ ಕೊಟ್ಟ. ಕೊನೆಗೂ ಏಂಟಾಯಿತು. ಇವರಿಗೆ ತಮಿಳು ಭಾಸೆ ಬ್ಯಾರೆ ಬರಕ್ಕಿಲ್ಲ. ಒಂದು ಬಿಳಿ ಟಿಟಿ ಗಾಡಿ ಸ್ಲೋ ಮಾಡಿದ. ಇವರನ್ನೆ ನೋಡ್ತಾ ಇದ್ದ ಹೆಂಗೆ ಪೊಣೊ ಅಂದ... ಪೋಗ್ರಾಮ್, ಪೋಗ್ರಾಮ್ ಅಂದ. ವಾಂಗೊ ಅಂತ ಗಾಡಿಗೆ ಹತ್ತಿಸಿಕೊಂಡ ಯಲ್ಡು ಘಂಟೆ ಆದಮ್ಯಾಕೆ ಇಳಿಸಿದ.

ಇಳಿದು ನೋಡುತ್ತಾರೆ. ದೊಡ್ಡ ದೇವಸ್ಥಾನ. ಎಲ್ಲ ಹಷಣ ಸೀರೆ ಉಟ್ಕೊಂಡಿರೊ ಜನ ಸುತ್ತ ಮುತ್ತ... ಐದು ಸಾವಿರ ರೂಪಾಯಿ ಕೇಳಿದ ಡ್ರೈವರ್. ಮಂಜ ಕೊಡಕಿಲ್ಲ ಅಂತ ಕ್ಯಾತೆ ತೆಗೆದ. ಹೆಂಗಸರೆಲ್ಲಾ ಹಳದಿ ಸೀರೆ ಗಂಡಸರು ಹಳದಿ ಜುಬ್ಬನಲ್ಲಿ ಇದ್ದಿದಕ್ಕೆ ಡ್ರೈವರ್ ಓಂ ಸಕ್ತಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಕೊನೆಗೆ ಮಾತಾಡೊಕೆ ಭಾಸೆ ಬರದೆ ಮಂಜ ದುಡ್ಡು ಕೊಟ್ಟ. ಬೋರ್ಡು ಓದೋಣ ಅಂದ್ರೆ ಯಲ್ಲ ಕಡೆ ಜಿಲೀಬಿ ಅಕ್ಷರ. ಕೊನೆಗೆ ಸಿದ್ಲಿಂಗುಗೆ ಫೋನ್ ಮಾಡಿ ಮೆಟ್ಟುಪಾಳ್ಯ ತಲುಪಿ ಕಾರ್ಯಕ್ರಮ ಮಾಡಿರು. ಊರಿಗೆ ಬತ್ತಿದ್ದಂಗೆ ಯಲ್ಲರೂ ಕಳ್ ಮಂಜನ್ನ ನಂಬಿ ಮೆಟ್ಟುಪಾಳ್ಯಕ್ಕೆ ಹೋದವಲ್ಲ ನಾವು ಮೆಟ್ ನಾಗೆ ಹೊಡ್ಕೊಬೇಕು ಅಂತ ಅವನಿಗೆ ನಾಲಕ್ಕು ಇಕ್ಕಿ ಮಿಕ್ಕ ಕಾಸ್ ಕಿತ್ಕೊಂಡರು

ಬುಧವಾರ, ಅಕ್ಟೋಬರ್ 02, 2013

ಗಾಂಧಿ ವಿಸೇಸ



ಕಳ್ ಮಂಜ, ಕ್ವಾಟ್ಲೆ ಕಿಸ್ನ, ಯಂಕ್ಟ ಯಲ್ಲಾ ಸಿವಮ್ಮನ ಹೋಟೆಲ್ನಾಗೆ ವಡೆ ತಿಂಕಂಡು ಕುಂತಿದ್ರು. ...ಮಂಜಣ್ಣ, ನಾಳಿಕ್ಕೆ ಗಾಂಧಿ ಜಯಂತಿ ಐತೆ ಅಂತು  ಸಿವಮ್ಮ ಕ್ಯಾಲೆಂಡ್ರು ನೋಡಿ .......ಓ ನಾಳೆನೇನಾ, ಮರೆತೆ ಹೋಗಿತ್ತು ಕನ್ಲಾ ಅಂದ ಕಿಸ್ನ...ಎನೂ ತಯಾರಿನೆ ಮಾಡಿಲ್ವಲ್ಲ ಅಂದ ಮಂಜ....

ಯಾರಿಗಾದ್ರೂ ಗಾಂಧಿ ವೇಸ ಹಾಕಿಸಬೇಕು ಕನ್ಲಾ.....

ನಾನಂತೂ ಹಾಕಲಪ್ಪ....ಮಗಂದು ಹೋದ ಕಿತ ಗಾಂಧಿ ಪಾಲ್ಟು ಹಾಕಿ ಬಗ್ಕೊಂಡು ನೆಡೆದು ಮೂರು ದಿನ ಸೊಂಟ ಹಿಡಕಂಡಿತ್ತು ಅಂದ ಯಂಕ್ಟ.....

ಸರಿ ಬ್ಯಾಡ ಬುಡ್ಲ ಮಾಡೊದು ಅಂದ ಕಿಸ್ನ...ಸಿವಮ್ಮನಿಗೆ ಬಿಗ್ನೆಸ್ ಹೋಯ್ತದೆ ಅಂತ ಗಾಂಧಿ ಪಾಲ್ಟ್ ಬಗ್ಗೆ ಯೋಸ್ನೆ ಮಾಡಬೇಡ ಕನ್ಲಾ ಮಂಜ...ನನ್ನ ತಂಗಿ ಕೆಂಪಮ್ಮ ಬಂದವಳೇ ಊರಿಂದ...ಅವಳು ಮಾಡ್ತಾಳೆ ಅಂತು.....ಕೆಂಪಮ್ಮ ಹ್ಯೆಂಗೆ ಮಾಡಾಳು ಗಾಂಧಿ ಪಾಲ್ಟು... ಅದೆಲ್ಲಾ ಆಗಕಿಲ್ಲ ಅಂದ ಕಿಸ್ನ......ಹೇ ಮಾಡಲಿ ಬುಡ್ಲಾ...ಸಕ್ಕತ್ ಜನ ಜಮಾಯಿಸ್ತಾರೆ ಅಂದ ಕಳ್ ಮಂಜ.......

ಹೇ ಅವರೂರು ಹೀರೆಗೌಡನದೊಡ್ಡಿನಾಗೆ ಒಂದು ಕಿತ ಗಾಂಧಿ ಪಾಲ್ಟು ಹಾಕಿತ್ತು ಕೆಂಪಿ ಅಂತು ಸಿವಮ್ಮ.......

ಸರಿ ಈಗ ಟೇಮ್ ಇಲ್ಲ..ನಾಳೆ ಬೆಳ್ಳಿಗೆ ಗಾಂಧಿ ವೇಸ ಹಾಕಿಸು.....ಇಸ್ಕೂಲ್ ತವನೇ ಮಾಡಮ.....ಹೋದ ಕಿತ ತರ ಯಾವುದು ಯಡವಟ್ ಆಗಬಾರದು ಕನ್ಲಾ....ಕಾಂಗ್ರೆಸ್ ಬಾವುಟ ತರಬ್ಯಾಡ ಕನ್ಲಾ....ರಾಸ್ಟ್ರ ಧ್ವಜ ತಕ್ಕಂಡ್ ಬಾ ಅಂದ ಮಂಜ.... ಮಂಜ ಸಾಸಕರಿಗೆ ಪೋನ್ ಮಾಡಿದ...ಆಯ್ತು ಮಾಡ್ರಲಾ...ಖರ್ಚು ಎನಾತದೊ ನಾ ಕೊಡ್ತೀನಿ.....ಪೊಲೀಸು, ಪೋಟೊ, ವಿಡಿಯೊ, ಟಿವಿ ನವರಿಗೂ ಹೇಳ್ತೀನಿ ಅಂದ್ರು....ಟ್ಯಾಂಕ್ಸಣ್ಣೊ ಅಂದ ಮಂಜ....

ನಾನು ಜುಲೋಬಿ ಬೂಂದಿ ಮಾಡಲಾ ಅಂತು ಸಿವಮ್ಮ...ಆತು ಮಾಡು ಸಾಸಕ್ರು ಕಾಸ್ ಕೊಡ್ತಾರೆ ಅಂದ ಮಂಜ....ತಮಟೆಗೆಲ್ಲಾ ಹೇಳಲಾ.....ಸ್ಕೂಲ್ ಐಕಳು ಹೆಂಗಿದ್ರೂ ಬತ್ತಾರೆ ....

ಮಾರನೆ ದಿನ ತಮಟೆ ಸದ್ದಿಗೆ ಜನ ಯಲ್ಲಾ ಜಮಾಯಿಸಿರು.....ತಮಟೆಯವನು ಬ್ಯಾರೆ ಗಾಂಧಿ ವೇಸದಾಗೆ ಕೆಂಪಮ್ಮ ಬತ್ತಾರೆ ಅಂತಿದ್ದ...........

ಕೆಂಪಮ್ಮ ಬೆಳ್ಳಿಗೆನೆ ಮೇಕಪ್ ಯಲ್ಲಾ ಮಾಡ್ಕಂಡು ರೆಡಿ ಆಗಿತ್ತು...ಗಾಂಧಿನಾ ಇಸ್ಕೂಲ್ ತಕ್ಕೆ ಕರೆದುಕೊಂಡು ಬರೋಕೆ ಅಂತ ಮಾಂಸದ ಅಂಗಡಿ ಇಮಾಮ್ ಸಾಬಿದು ಲಗ್ಗೇಜ್ ಆಟೋ ಕಳಿಸಿದ್ದ......ಗಾಂಧಿ ಜಯಂತಿ ದಿನ ಮಾಂಸ ಮಾರೊಂಗಿಲ್ಲ ಅಂತ ಮಾಂಸನಾ ಆಟೋ ಒಳಗೆನೇ ಮಡಗಿದ್ದ ಇಮಾಮ್ ಸಾಬಿ...ವಸಿ ಅಜೆಸ್ಟ್ ಮಾಡ್ಕಂಡ್ ಕೂತ್ಕಳಮ್ಮ ಅಂದ ಡ್ರೇವರ್ ಪಾಶ....ಕೆಂಪಮ್ಮ ಆಟೋ ಅತ್ತಿ ಬತ್ತು ಇಸ್ಕೂಲ್ ತಕ್ಕೆ.....

ಸಾಸಕರು ಬಾವುಟ ಹಾರಿಸಿ ರಘುಪತಿ ರಾಘವ ರಾಜಾ ರಾಮ್ ಹೇಳ್ತಾ ಇದ್ರು....ಮಗಂದು ಆಟೋ ಬಂತು...ಗಾಂಧಿ ಇಳಿತಿದ್ದಂಗೆ ಜನ ರಘುಪತಿನಾ ಅರ್ಧಕ್ಕೆ ನಿಲ್ಸಿ ಆಟೋ ಸುತ್ತ ತುಂಬಿಕೊಂಡ್ರು....ಟಿವಿನವರು ಕ್ಯಾಮರಾ ತಕ್ಕಂಡ್ರು.......ಗಾಂಧಿ ವೇಸ ನೋಡಿ ಹೆಂಗಸರು ಸಹ ಸಿಳ್ಳೆ ಹೊಡಿತಾ ಇದ್ದರು. ಹಂಗೆ ಸ್ಟೇಜ್ ಮ್ಯಾಕೆ ಬಂತು....
ಸಾಸಕರು ಇದೇನಲಾ ಹೊಸ ಗಾಂಧಿ ಅಂದ್ರು.......ನೋಡಿರೆ ಕೆಂಪಮ್ಮ ಬಂದಿದ್ದು ಇಂದಿರಾ ಗಾಂಧಿ ವೇಸ ಹಾಕ್ಕಂಡು....ಕಳ್ ಮಂಜ ಹಂಗೆ ದೂರ ಯಸ್ಕೇಪ್.....ಸಿವಮ್ಮನ ಕೇಳಿರೆ ನೀವು ಗಾಂಧಿ ಅಂದ್ರಿ ...ಯಾವ ಗಾಂಧಿ ಅಂತ ಹೇಳಿದ್ರಾ ಅಂತು.....

ಆರು ತಿಂಗಳ ಹಿಂದೆ ಹರಕೆ ಅಂತ ನಂಜನಗೂಡಲ್ಲಿ ಬ್ಯಾರೆ ಮುಡಿ ಕೊಟ್ಟು ಈಗ ಇಂದಿರಾ ಗಾಂಧಿಯಷ್ಟೆ ಕೂದಲು ಇತ್ತು ಕೆಂಪಮ್ಮನಿಗೆ....ಅದ್ಕೆ ವಸಿ ಸೈಡಲ್ಲಿ ದ್ವಾಸೆ ಹಿಟ್ಟು ಬಳಿದು ಸೇಮ್ ಇಂದಿರಾ ಗಾಂಧಿ ತರ ಸೀರೆ ಉಡ್ಕಂಡಿ ಬಂದಿತ್ತು.....
ಲೇ ಮುಂದಿನ ಕಿತ ವನಜಾಕ್ಸಿಗೆ ಸೋನಿಯಾ ವೇಸ ಹಾಕಿಸ್ಲಾ ಅಂದ ಯಂಕ್ಟ...ಏ ಥೂ ಅವಳ ಮಕ್ಕೆ.....




ಸೋಮವಾರ, ಸೆಪ್ಟೆಂಬರ್ 30, 2013

ಕಳ್ ಮಂಜ ಹಾಳ್ಡ್ ವೇರ್


ಕಳ್ ಮಂಜ ಮದುವೆ ಆಗೋಕೆ ಹೆಣ್ಣು ಹುಡುಕ್ತಾ ಇದ್ದ......ಯಲ್ಲರ ಹತ್ತಿರ ಹೇಳಿದ್ದ... ಯಾವುದಾದ್ರು ಹುಡುಗಿ ಇದ್ರೆ ಹೇಳಿ ಅಂತ...ಒಂದು ಸಲ ಯಂಕ್ಟನ ಸೋದರಮಾವ ಭೀಮಪ್ಪ ಊರಿಗೆ ಬಂದಾಗ ಅವರಿಗೂ ಹೇಳಿದ...
ಚುಂಚುನಕುಪ್ಪೆನಾಗೆ ಒಂದು ಒಳ್ಳೆ ಸಂಬಂಧ ಐತೆ ...ಆದ್ರೆ ಹುಡುಗ ಸಾಪ್ಟ್ ವೇರು ಇಲ್ಲ ಹಾಲ್ಡ್ ವೇರು ಬೇಕಾಂತರೆ ಅಂದ್ರು ಭೀಮಪ್ಪ...ನಾನು ಹಾಲ್ಡ್ ವೇರ್ ಪೀಲ್ಡ್ ನಾಗೆ ಇರೋದು ಅಂತೇಳಿ ಅಂದ ಮಂಜ...ಸರಿ ಅಂತ ಹುಡುಗಿ ಮನೆಗೆ ಪೋನ್ ಮಾಡಿ ಹೇಳಿರು ಭೀಮಪ್ಪ....ಅವರು ಸಹ ಕರೆದುಕೊಂಡ್ ಬನ್ನಿ ಅಂದ್ರು....
ಒಂದು ಟಿಟಿ ಗಾಡಿ ಮಾಡ್ಕಂಡು ಹನ್ನೆಳ್ಡು ಜನ ಹೊಳಟ್ರು...ಕಳ್ ಮಂಜ ಸಿದ್ಲಿಂಗು ತವ ಕಂಪ್ಯೂಟ್ರು, ಸಾಪ್ಟ್ ವೇರು, ಹಾಲ್ಡ್ ವೇರು ಯಲ್ಲ ವಸಿ ತಿಳ್ಕಂಡಿದ್ದ...ಕಿಸ್ನ, ಯಂಕ್ಟ ಯಲ್ಲ ಬಡ್ಡಿ ಹೈದ್ನೆ ಯಾವಾಗ್ಲಾ ಕಲಿತೆ ಹಾಳ್ಡ್ ವೇರು ಅನ್ನೋರು.....ಅವರಿಗೂ ಅದೇನು ಅಂತ ಗೊತ್ತಿರಲಿಲ್ಲ...
ಚುಂಚುನಕುಪ್ಪೆಗೆ ಹೋಗ್ತಾ ಇದ್ದಂಗೆ ಜೂಸು ತಿಂಡಿ ಯಲ್ಲ ಕೊಟ್ಟರು....ಯಂಕ್ಟ ಕಿಸ್ನ ಯಲ್ಲ ಸಕ್ಕತಾಗಿ ತಿಂದ್ರು...ಎನ್ಲಾ ಬರೀ ಹೆಣ್ಣು ನೋಡೋಕ್ ಬಂದಾಗಲೇ ಈ ಪಾಟಿ ಐಟಮ್ಸ್ ಮಡಗವರಲ್ಲ ಇನ್ನ ಮದ್ವೆಗೆ ಏನೇನ್ ಮಾಡ್ಸಾರು.....ಗೋಬಿ, ಚಿಪ್ಸ್, ಪಕೋಡ, ಸಮೋಸ, ಸಾವಿಗೆ ಬಾತು, ಮೈಸೂರ್ ಪಾಕು, ಜುಲೇಬಿ, ರಸ್ನ, ಬಾಳೆಹಣ್ಣು ಯಲ್ಲ ಇತ್ತು...ಒಳ್ಳೆ ಕುಳನೇ ತೋರಿಸಿದ್ದೀಯಾ ಕನ್ಲಾ ಅಂದ ಕಿಸ್ನ.....
ಹುಡುಗಿನಾ ನೋಡಿ ಆತು...ಹುಡುಗಿ ಅಪ್ಪ ಮಂಜನ್ನ ಕೇಳಿರು...ಏನ್ ಕೆಲಸ ಅಂತ....ನನದೂ ಹಾಲ್ಡ್ ವೇರ್ ಪೀಲ್ಡು ಅಂದ...
ಸರಿ ಹುಡುಗಿ ಕೇಳುದ್ಲು...ನಿಮ್ಮ ಹತ್ರ ಗ್ರೀನ್ ಕಾರ್ಡ್ ಇದ್ಯಾ.....ಓ ಐತೆ...ಹಸಿರು ಕಾಲ್ಡ್ ಅಲ್ವ....ನಮ್ಮವ್ವನೇ ಮಾಡಿಸವಳೆ ಅಂದ ಮಂಜ....ಹುಡುಗಿಗೂ ಗ್ರೀನ್ ಕಾರ್ಡ್ ಅಂದ್ರೇನು ಅಂತ ಗೊತ್ತಿರಲಿಲ್ಲ. ಸುಮ್ನೆ ಅಮೇರಿಕಾಗೆ ಹೋಗೋಕೆ ಅದು ಬೇಕು ಅಂತ ಅಷ್ಟು ಗೊತ್ತಿತ್ತು....
ಅಷ್ಟಕ್ಕೆ ಸುಮ್ನೆ ಇರದೆ ಹಸ್ರು ಕಾಲ್ಡಿಗೆ ಸಕ್ಕರೆನೇ ಕೊಡಕಿಲ್ಲ ನಮ್ಮೂರಾಗೆ ಅಂದ...ಆಗ ಯಾಕೊ ಡೌಟ್ ಹೊಡಿತು ಅವರಿಗೆ....ಸರಿ ನಾವು ಆಮ್ಯಾಕೆ ಹೇಳ್ತೀವಿ ಅಂತ ಕಳಿಸಿಕೊಟ್ರು....ಆಮ್ಯಾಕೆ ಭೀಮಪ್ಪನ ತವ ಕೇಳಿರು ಮಂಜನ ಕೆಲಸ ಏಲ್ಲಿ ಕೇಳಿ ಅಂತ...ಆಗ ಕೇಳಿದ್ಕೆ ಬಾಯಿಬುಟ್ಟ ಮಂಜ ...
ಟೌನ್ ನಾಗೆ ಕರಿಮುಲ್ಲಾ ಸಾಬಿ ಹಾರ್ಡ್ ವೇರ್ ಅಂಗಡಿನಾಗೆ ನಟ್ಟು ಬೋಲ್ಟು ತೂಕ ಹಾಕೊ ಕೆಲಸ....ಅದುನೂ ಹಾರ್ಡ್ ವೇರ್ ಪೀಲ್ಡು ......
ಥೂ ನಿನ್ ಬಾಯ್ಗೆ ನಟ್ಟು ಬೋಲ್ಟ್ ಇಕ್ಕ.....

ಮಂಗಳವಾರ, ಆಗಸ್ಟ್ 27, 2013

ಕೃಷ್ಣ ಜನ್ಮಾಷ್ಟಮಿ


ಶ್ರೀ ಕೃಷ್ಣ ಪರಮಾತ್ಮನನ್ನು ಕ್ಷಮೆ ಯಾಚಿಸುತ್ತ )

ನೋಡ್ರಲಾ ಇನ್ನ ಮ್ಯಾಕೆ ನಾವು ಬರೀ ಗಣೇಸನ ಹಬ್ಬ ಮಾತ್ರ ಮಾಡೋದಲ್ಲ.....ಯಲ್ಲಾ ಹಬ್ಬನೂ ಆಚಾರಣೆ ಮಾಡಮ ಅಂದ ಕಳ್ ಮಂಜ.....ಯಲಾರೂ ಆಯ್ತಪ್ಪ ಅಂದ್ರು....ಯಾವುದ್ಲಾ ನೆಕ್ಸಟು ಹಬ್ಬ ಅಂದ ಕ್ಯಾತೆ ರಾಮ....ಗೋಕುಲಸ್ಟಮಿ ಕನ್ಲಾ.... ಇದ್ಯಾವುದಲಾ ಹೊಸ ಹಬ್ಬ ನಾ ಕ್ಯೊಳೆ ಇಲ್ಲ....

ಏ ಇದು ಕಿಸ್ನ ಹುಟ್ಟಿದ ದಿನ ಕಣಲಾ... ಈ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ಇಲ್ವ ಹಂಗೆ.....ನಮ್ಮ ಕ್ವಾಟ್ಲೆ ಕಿಸ್ನನದಾ....ಏ ಥೂ.. ಅವನಲ್ಲ ಕನ್ಲಾ...ಶ್ರೀ ಕೃಷ್ಣ ಪರಮಾತ್ಮನದು....

ಸರಿ ಬುದ್ವಾರ ಗಣೇಸನ ಗುಡಿ ತವನೇ ಮಾಡಣ ಈ ಕಿತ.....ಡೆಕೊರೇಸನ್ ಯಲ್ಲಾ ಕಳ್ ಮಂಜ ವಹಿಸಿಕೊಂಡ....ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕ್ಯಾತೆ ರಾಮನ ಕಡೆಯಿಂದ ಅಂತ ಆತು....

ಬುದ್ವಾರ ಬೆಳ್ಳಿಗೆ ಬಂತು... ಗೌಡ್ರು ಸ್ಯಾನೆ ಸಿಟ್ಟು ಮಾಡ್ಕೊಂಡು ಕೈನಾಗೆ ಮಚ್ಚು ತಕ್ಕಂಡು ಎಲ್ಲಿ ಆ ಕಿಸ್ನ ಅಂತ ಕಿರಚಾಡಿಕೊಂಡು ಗುಡಿತಕ್ಕೆ ಬತ್ತ ಇದ್ದ.....ಯಲ್ರಿಗೂ ಆಸ್ಚರ್ಯ....ಸಿವಮ್ಮನ ಹೋಟೆಲ್ ತವ ಕುಂತಿದ್ದ ಜನ ಎಲ್ಲಾ ಇವನಿಗೇನ್ಲಾ ಬತು ದೊಡ್ಡರೋಗ...ಅಲ್ಲಿ ನೋಡಿರೆ ಕಿಸ್ನನ ಹಬ್ಬ ಮಾಡ್ತಾವ್ರೆ...ಇವನು ಕಿಸ್ನನ ಬೈಕೊಂಡು ಓಡ್ತಾವನೆ ಅಂತಿದ್ರು.....ಸಿವಮ್ಮ ಥೂ ಆ ಗೌಡನ ಕೈ ಸೇದೋಗ ಅಂತ ಸಾಪನೂ ಹಾಕಿಲು....

ಗುಡಿ ತವ ಬಂದು ಎಲ್ಲಿ ಆ ಬಡೆತ್ತದು ಅಂತಿದ್ದ ಗೌಡ....ಎಲ್ಲರೂ ಸಮಾಧಾನ ಮಾಡಿರು. "ಏನಾತು ಗೌಡ್ರೆ" ಅಂದ ಬುಲ್ಡೆ ಬಸವ.....ಎನ್ಲಾ ಇದು ಬೋಲ್ಡುನೋಡಲಾ ಅಂದ...ನೋಡಿರೆ ಕಳ್ ಮಂಜ "ಕಿಸ್ನ ಜಯಂತಿ" ಅಂತ ಗುಡಿ ಬಾಗಿಲ ತವ ದೊಡ್ಡದಾಗಿ ಹೂವಿನ ಆರ್ಚ್ ಮಾಡಿ ಹಾಕಿದ್ದ....

ಆಮ್ಯಾಕೆ ಮಾಲಿಂಗ ಬಿಡ್ಸಿ ಹೇಳಿದ....ಇದು ಕೃಷ್ಣ  ಜನ್ಮಾಷ್ಟಮಿ ಗೌಡ್ರೆ ಅಂತ....ಓ ಹಂಗ......ಯಾವನೋ ಬಡ್ಡಿ ಮಗ ಬೆಳ್ಳಿಗೆ ಮನೆ ತವ ಬಂದು... ಗೌಡ್ರೆ ನಿಮ್ಮ ಮಗಳು ಜಯಂತಿಗೂ ಆ ಕಿಸ್ನನಿಗೂ ಮದ್ವೆ ಅಂತೆ...ಬೋಲ್ಡ್ ಹಾಕವ್ರೆ ಗುಡಿ ತವ ಅಂದ....ಅದ್ಕೆ ಓಡೋಡ್ ಬಂದೆ...ಅಂದ ಗೌಡ.

ಆ ಕಳ್ ಮಂಜನೆಯಾ ಹಾಕಿದ್ದು
ನೀವೆ ಹೇಳುದ್ರಿ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ತರನೇ ಕಿಸ್ನ ಹುಟ್ಟಿದ ದಿನ ಅಂತ ಅದುಕ್ಕೆ ಹಾಕಿದೆ.... ಅಂದ ಕಳ್ ಮಂಜ
ಥೂ ನಿನ್ನ ಮಕ್ಕೆ.......

ಇನ್ನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹೆಂಗಾತು ಅಂತ ನಾಳೆ ಹೇಳ್ತೀನಿ....
ಕೃಷ್ಣ  ಜನ್ಮಾಷ್ಟಮಿಯ ಶುಭಾಶಯಗಳು.


ಭಾನುವಾರ, ಜೂನ್ 16, 2013

ಆಶ್ವಾಸನೆ


ಪ್ರಳಯವಾದರೂ
ಕೈ ಬಿಡುವುದಿಲ್ಲವೆಂದು
ಮಂತ್ರಿಗಳು ಕೊಟ್ಟರು
ಆಶ್ವಾಸನೆ....
ಪ್ರಣಯಕ್ಕೂ
ಮುನ್ನವೇ
ಕೈ ಬಿಡಲು ಕಾರಣ
ಆಶಾ ವಾಸನೆ....


ಬುಧವಾರ, ಏಪ್ರಿಲ್ 24, 2013

ಪ್ರದರ್ಶನ



ಬಳಸುವುದು ಹೇಗೆಂದು     
ತೋರಿಸಿದರು ಮಂತ್ರಿಗಳು
ಉದ್ಘಾಟಿಸಿ
ಸಾರ್ವಜನಿಕ ಗ್ರಂಥಾಲಯ....
ಮಾಧ್ಯಮಗಳಿಗೆ ಕುತೂಹಲ
ನೋಡಲು ಹೇಗೆ
ಉದ್ಘಾಟಿಸುವರೋ
ಸಾರ್ವಜನಿಕ ಶೌಚಾಲಯ....


ಸೋಮವಾರ, ಏಪ್ರಿಲ್ 22, 2013

ಶಿಬಿರ



ರಕ್ತ ದಾನ
ಮಾಡಿ ಉದ್ಘಾಟಿಸಿದರು
ಮಂತ್ರಿಗಳು 
ರಕ್ತ ಶಿಬಿರವನ್ನ...
ಕುಟುಂಬ ಯೋಜನೆ 
ಶಿಬಿರ ಉದ್ಘಾಟನೆಗೆ 
ಕಳುಹಿಸಿದರು
ತಮ್ಮ ಶ್ರೀಮತಿಯನ್ನ........