ಬುಧವಾರ, ಅಕ್ಟೋಬರ್ 02, 2013

ಗಾಂಧಿ ವಿಸೇಸಕಳ್ ಮಂಜ, ಕ್ವಾಟ್ಲೆ ಕಿಸ್ನ, ಯಂಕ್ಟ ಯಲ್ಲಾ ಸಿವಮ್ಮನ ಹೋಟೆಲ್ನಾಗೆ ವಡೆ ತಿಂಕಂಡು ಕುಂತಿದ್ರು. ...ಮಂಜಣ್ಣ, ನಾಳಿಕ್ಕೆ ಗಾಂಧಿ ಜಯಂತಿ ಐತೆ ಅಂತು  ಸಿವಮ್ಮ ಕ್ಯಾಲೆಂಡ್ರು ನೋಡಿ .......ಓ ನಾಳೆನೇನಾ, ಮರೆತೆ ಹೋಗಿತ್ತು ಕನ್ಲಾ ಅಂದ ಕಿಸ್ನ...ಎನೂ ತಯಾರಿನೆ ಮಾಡಿಲ್ವಲ್ಲ ಅಂದ ಮಂಜ....

ಯಾರಿಗಾದ್ರೂ ಗಾಂಧಿ ವೇಸ ಹಾಕಿಸಬೇಕು ಕನ್ಲಾ.....

ನಾನಂತೂ ಹಾಕಲಪ್ಪ....ಮಗಂದು ಹೋದ ಕಿತ ಗಾಂಧಿ ಪಾಲ್ಟು ಹಾಕಿ ಬಗ್ಕೊಂಡು ನೆಡೆದು ಮೂರು ದಿನ ಸೊಂಟ ಹಿಡಕಂಡಿತ್ತು ಅಂದ ಯಂಕ್ಟ.....

ಸರಿ ಬ್ಯಾಡ ಬುಡ್ಲ ಮಾಡೊದು ಅಂದ ಕಿಸ್ನ...ಸಿವಮ್ಮನಿಗೆ ಬಿಗ್ನೆಸ್ ಹೋಯ್ತದೆ ಅಂತ ಗಾಂಧಿ ಪಾಲ್ಟ್ ಬಗ್ಗೆ ಯೋಸ್ನೆ ಮಾಡಬೇಡ ಕನ್ಲಾ ಮಂಜ...ನನ್ನ ತಂಗಿ ಕೆಂಪಮ್ಮ ಬಂದವಳೇ ಊರಿಂದ...ಅವಳು ಮಾಡ್ತಾಳೆ ಅಂತು.....ಕೆಂಪಮ್ಮ ಹ್ಯೆಂಗೆ ಮಾಡಾಳು ಗಾಂಧಿ ಪಾಲ್ಟು... ಅದೆಲ್ಲಾ ಆಗಕಿಲ್ಲ ಅಂದ ಕಿಸ್ನ......ಹೇ ಮಾಡಲಿ ಬುಡ್ಲಾ...ಸಕ್ಕತ್ ಜನ ಜಮಾಯಿಸ್ತಾರೆ ಅಂದ ಕಳ್ ಮಂಜ.......

ಹೇ ಅವರೂರು ಹೀರೆಗೌಡನದೊಡ್ಡಿನಾಗೆ ಒಂದು ಕಿತ ಗಾಂಧಿ ಪಾಲ್ಟು ಹಾಕಿತ್ತು ಕೆಂಪಿ ಅಂತು ಸಿವಮ್ಮ.......

ಸರಿ ಈಗ ಟೇಮ್ ಇಲ್ಲ..ನಾಳೆ ಬೆಳ್ಳಿಗೆ ಗಾಂಧಿ ವೇಸ ಹಾಕಿಸು.....ಇಸ್ಕೂಲ್ ತವನೇ ಮಾಡಮ.....ಹೋದ ಕಿತ ತರ ಯಾವುದು ಯಡವಟ್ ಆಗಬಾರದು ಕನ್ಲಾ....ಕಾಂಗ್ರೆಸ್ ಬಾವುಟ ತರಬ್ಯಾಡ ಕನ್ಲಾ....ರಾಸ್ಟ್ರ ಧ್ವಜ ತಕ್ಕಂಡ್ ಬಾ ಅಂದ ಮಂಜ.... ಮಂಜ ಸಾಸಕರಿಗೆ ಪೋನ್ ಮಾಡಿದ...ಆಯ್ತು ಮಾಡ್ರಲಾ...ಖರ್ಚು ಎನಾತದೊ ನಾ ಕೊಡ್ತೀನಿ.....ಪೊಲೀಸು, ಪೋಟೊ, ವಿಡಿಯೊ, ಟಿವಿ ನವರಿಗೂ ಹೇಳ್ತೀನಿ ಅಂದ್ರು....ಟ್ಯಾಂಕ್ಸಣ್ಣೊ ಅಂದ ಮಂಜ....

ನಾನು ಜುಲೋಬಿ ಬೂಂದಿ ಮಾಡಲಾ ಅಂತು ಸಿವಮ್ಮ...ಆತು ಮಾಡು ಸಾಸಕ್ರು ಕಾಸ್ ಕೊಡ್ತಾರೆ ಅಂದ ಮಂಜ....ತಮಟೆಗೆಲ್ಲಾ ಹೇಳಲಾ.....ಸ್ಕೂಲ್ ಐಕಳು ಹೆಂಗಿದ್ರೂ ಬತ್ತಾರೆ ....

ಮಾರನೆ ದಿನ ತಮಟೆ ಸದ್ದಿಗೆ ಜನ ಯಲ್ಲಾ ಜಮಾಯಿಸಿರು.....ತಮಟೆಯವನು ಬ್ಯಾರೆ ಗಾಂಧಿ ವೇಸದಾಗೆ ಕೆಂಪಮ್ಮ ಬತ್ತಾರೆ ಅಂತಿದ್ದ...........

ಕೆಂಪಮ್ಮ ಬೆಳ್ಳಿಗೆನೆ ಮೇಕಪ್ ಯಲ್ಲಾ ಮಾಡ್ಕಂಡು ರೆಡಿ ಆಗಿತ್ತು...ಗಾಂಧಿನಾ ಇಸ್ಕೂಲ್ ತಕ್ಕೆ ಕರೆದುಕೊಂಡು ಬರೋಕೆ ಅಂತ ಮಾಂಸದ ಅಂಗಡಿ ಇಮಾಮ್ ಸಾಬಿದು ಲಗ್ಗೇಜ್ ಆಟೋ ಕಳಿಸಿದ್ದ......ಗಾಂಧಿ ಜಯಂತಿ ದಿನ ಮಾಂಸ ಮಾರೊಂಗಿಲ್ಲ ಅಂತ ಮಾಂಸನಾ ಆಟೋ ಒಳಗೆನೇ ಮಡಗಿದ್ದ ಇಮಾಮ್ ಸಾಬಿ...ವಸಿ ಅಜೆಸ್ಟ್ ಮಾಡ್ಕಂಡ್ ಕೂತ್ಕಳಮ್ಮ ಅಂದ ಡ್ರೇವರ್ ಪಾಶ....ಕೆಂಪಮ್ಮ ಆಟೋ ಅತ್ತಿ ಬತ್ತು ಇಸ್ಕೂಲ್ ತಕ್ಕೆ.....

ಸಾಸಕರು ಬಾವುಟ ಹಾರಿಸಿ ರಘುಪತಿ ರಾಘವ ರಾಜಾ ರಾಮ್ ಹೇಳ್ತಾ ಇದ್ರು....ಮಗಂದು ಆಟೋ ಬಂತು...ಗಾಂಧಿ ಇಳಿತಿದ್ದಂಗೆ ಜನ ರಘುಪತಿನಾ ಅರ್ಧಕ್ಕೆ ನಿಲ್ಸಿ ಆಟೋ ಸುತ್ತ ತುಂಬಿಕೊಂಡ್ರು....ಟಿವಿನವರು ಕ್ಯಾಮರಾ ತಕ್ಕಂಡ್ರು.......ಗಾಂಧಿ ವೇಸ ನೋಡಿ ಹೆಂಗಸರು ಸಹ ಸಿಳ್ಳೆ ಹೊಡಿತಾ ಇದ್ದರು. ಹಂಗೆ ಸ್ಟೇಜ್ ಮ್ಯಾಕೆ ಬಂತು....
ಸಾಸಕರು ಇದೇನಲಾ ಹೊಸ ಗಾಂಧಿ ಅಂದ್ರು.......ನೋಡಿರೆ ಕೆಂಪಮ್ಮ ಬಂದಿದ್ದು ಇಂದಿರಾ ಗಾಂಧಿ ವೇಸ ಹಾಕ್ಕಂಡು....ಕಳ್ ಮಂಜ ಹಂಗೆ ದೂರ ಯಸ್ಕೇಪ್.....ಸಿವಮ್ಮನ ಕೇಳಿರೆ ನೀವು ಗಾಂಧಿ ಅಂದ್ರಿ ...ಯಾವ ಗಾಂಧಿ ಅಂತ ಹೇಳಿದ್ರಾ ಅಂತು.....

ಆರು ತಿಂಗಳ ಹಿಂದೆ ಹರಕೆ ಅಂತ ನಂಜನಗೂಡಲ್ಲಿ ಬ್ಯಾರೆ ಮುಡಿ ಕೊಟ್ಟು ಈಗ ಇಂದಿರಾ ಗಾಂಧಿಯಷ್ಟೆ ಕೂದಲು ಇತ್ತು ಕೆಂಪಮ್ಮನಿಗೆ....ಅದ್ಕೆ ವಸಿ ಸೈಡಲ್ಲಿ ದ್ವಾಸೆ ಹಿಟ್ಟು ಬಳಿದು ಸೇಮ್ ಇಂದಿರಾ ಗಾಂಧಿ ತರ ಸೀರೆ ಉಡ್ಕಂಡಿ ಬಂದಿತ್ತು.....
ಲೇ ಮುಂದಿನ ಕಿತ ವನಜಾಕ್ಸಿಗೆ ಸೋನಿಯಾ ವೇಸ ಹಾಕಿಸ್ಲಾ ಅಂದ ಯಂಕ್ಟ...ಏ ಥೂ ಅವಳ ಮಕ್ಕೆ.....