ಮನಸು ವಿಶ್ರಮಿಸುತ್ತ ಗಾಢ ನಿಧ್ದೆಯಲ್ಲಿತ್ತು. ರಾತ್ರಿಯೆಲ್ಲಾ ಸವಿಕನಸುಗಳ ಮೂಟೆಯನ್ನು ಹೊತ್ತು ತಂದ ಸುಖ ನಿದ್ದೆ ಇನ್ನು ಮರೆ ಮಾಚಿರಲಿಲ್ಲ. ಬಲಮಗ್ಗಲಿನಲ್ಲಿ ನಿನ್ನ ಸ್ಪರ್ಶ ಇರಲಿಲ್ಲ. ಎಡಮಗ್ಗಲಿನಲ್ಲಿ ಎಂದಿನಂತೆ ಹಕ್ಕಿಗಳ ಚಿಲಿಪಿಲಿ ಸದ್ದು ಮಾಡಿ "ಎದ್ದೇಳು ಬೆಳಗಾಯಿತು" ಎಂದು ಕರೆ ಘಂಟೆ ಬಾರಿಸುತ್ತ ತನ್ನ ನಿತ್ಯ ಕಾಯಕ ಮಾಡಿತ್ತು ನನ್ನ ಮೊಬೈಲು. ಕಿಟಕಿಯ ಪರದೆಯ ನಡುವೆ ರವಿತೇಜನ ಒಂದು ಕಿರಣ "ನಾನಾಗಲೆ ಬಂದಿದ್ದೀನಿ ಏದ್ದೇಳು" ಎಂದು ಹೇಳುತ್ತಿತ್ತು. ಯಾರು ಎಬ್ಬಿಸಿದರೂ ನೀನು ಮುದ್ದಿನ ಕೂಗಿನಲ್ಲಿ ಎಬ್ಬಿಸುವ ಪರಿ ಬರಲಿಲ್ಲಿ. ಬೆಳ್ಳಂಬೆಳ್ಳಿಗೆಯಿಂದ ಶುರುವಾಯಿತು ನಿನ್ನ ಸಿಹಿ ನೆನಪುಗಳು. ಎದ್ದು ಕೂತು ಅಂಗೈ ನೋಡಿ "ಕರಾಗ್ರೆ ........" ಹೇಳುತ್ತಿದ್ದಾಗ ಕಂದನ ನೆನಪಾಯಿತು. ನಾನು ತಪ್ಪಿಸಿದರೂ ನನ್ನ ಕಂದ ತಪ್ಪಿಸುತ್ತಿರಲಿಲ್ಲ. ಎದ್ದೇಳೊ ಕಂದ ಅಂದರೆ "ವೈಟ್ ಅಪ್ಪ ಕರಾಗ್ರೆ ಮಾಡ್ತೀನಿ!!!. ಕರಾಗ್ರೆ ವಸತೆಲಕ್ಷ್ಮೀ....." ಅಂತ ಹೇಳಿ ಏಳುತ್ತಿದ್ದ. ಮತ್ತೆ ಗಡಿಯಾರ ನೋಡಿ ಅದಕ್ಕೆ ಎರಡುವರೆ ಗಂಟೆ ಸೇರಿಸಿ ನೀನು ಏನು ಮಾಡುತ್ತಿರುತ್ತೀಯಾ ಅಂತ ಊಹಿಸೂತ್ತಾ ನಿನಗೊಂದು ಮುಂಜಾನೆ ಶುಭಾಶಯದ ಮೆಸೆಜ್ ಕಳಿಸಿದೆ. ಇರೋದು ಒಂದೆ ಭೂಮಿ ನನಗಿನ್ನು ಕನಸು ಕಾಣುವ ಮುಂಜಾನೆ, ನಿನಗಾಗಲೆ ದುಡಿಯುವ ಹಗಲು ಆರಂಭವಾಗಿತ್ತು.
ಈಗ ಮನೆಯಲ್ಲಿ ಸಪ್ಪಳ ಇಲ್ಲ.ನಾನೆಳುವ ಮೊದಲೆ ನೀನು ಸ್ನಾನ ಪೂಜೆ ಮುಗಿಸಿ ನಂತರ ಅಪ್ಪ ಮಗನನ್ನು ಎಬ್ಬಿಸಿ ಬಚ್ಚಲಮನೆಯಲ್ಲೆ ಶುರು ಆಗುತ್ತಿದ್ದ ಅವರಿಬ್ಬರ ನಡುವಿನ ಮುನಿಸು ಜಗಳಕ್ಕೆ ರಾಜಿ ಮಾಡಿಸಿ ಆತುರಾತುರವಾಗಿ ಮಗನಿಗೆ ಸ್ನಾನ ಮಾಡಿಸಿ ಅವನ ತಿಂಡಿ ಡಬ್ಬಿ ಜೊತೆಗೆ ತನಗೂ ನನಗೂ ಊಟದ ಡಬ್ಬಿ ರೆಡಿ ಮಾಡುತ್ತಿದದ್ದು ನೆನಪಾದದ್ದು ನಾನು ಫ್ರೀಡ್ಜ್ ಬಾಗಿಲು ತೆಗೆದು ಜಾಮ್ ಬಾಟಲಿನಲಿದ್ದ ಜಾಮ್ ಬ್ರೆಡ್ ಗೆ ಸವರುತ್ತಿದ್ದಾಗ.
ಸ್ನಾನ ಮುಗಿಸಿ ಆತುರವಾಗಿ ದೇವರಿಗೆ ದೀಪ ಹಚ್ಚುವಾಗಲೂ ನಿನ್ನ ನೆನಪಾಯಿತು. ಆತುರದಲ್ಲೂ ದೇವರ ಮುಂದಿನ ದೀಪ ಪ್ರತಿದಿನ ಬೆಳಗಿಸುತ್ತಿದ್ದೆ, ಈಗ ಕೆಲದಿನ ತಪ್ಪುತ್ತಿದೆ ಅದಕ್ಕೆ ದೇವರಲ್ಲೂ ಕ್ಷಮೆಯಾಚಿಸಿದೆ. ಪೂಜೆ ಮುಗಿಸಿ ಬಟ್ಟೆ ಧರಿಸುವಾಗಲೂ ನೀನು ಇಸ್ತ್ರಿ ಮಾಡಿಟ್ಟ ಗರಿಗರಿ ಶರ್ಟ್ ಇರಲಿಲ್ಲ. ವಾಷಿಂಗ್ ಮೆಷೀನ್ ಬಟ್ಟೆಗಳಿಂದ ತುಂಬಿತ್ತು, ಅದು ಸಹ ನಿನ್ನ ನೆನಪಿಸುತ್ತಿತ್ತು. ಬಾಗಿಲಿಗೆ ಬೀಗ ಜಡಿಯುವ ಅಭ್ಯಾಸವೆ ಮರೆತುಹೋಗಿದ್ದ ನನಗೆ ಬಾಗಿಲ ಬೀಗ ಹಾಕಲು ಹೋದಾಗಲೂ ಬೀಗವು ಕೇಳುತ್ತಿತ್ತು ಮನೆಯೊಡತಿ ಎಂದು ಬರುವಳು ಎಂದು, ಅದಕ್ಕೂ ಉತ್ತರ ಕೊಟ್ಟು ಬೀಗ ಹಾಕಿ ಕಾರ್ ಅತ್ತಿದೆ.
ಕಾರಿನಲ್ಲಿ ಪಕ್ಕದ ಸೀಟಿನಲ್ಲಿ ನೀನಿಲ್ಲದೆ ಸೀಟಿಗೆ ಕಳೆ ಇರಲಿಲ್ಲ. ನಮ್ಮಿಬ್ಬರ ಅರ್ಧ ತಾಸಿನ ಸಂಭಾಷಣೆ ಆಲಿಸುತ್ತಿದ್ದ ನನ್ನ ಕಾರಿಗೂ ಸಹ ಬೇಸರವಾಗಿತ್ತೊ ಎನೋ, ಚೆಂದದ ಬೆಡಗಿಯನ್ನು ಕರೆತರಲಿಲ್ಲವೆಂದು ಅದು ಸಹ ನನ್ನ ಮೇಲೆ ಮುನಿಸಿಕೊಂಡಿತ್ತು. ಅರ್ಧ ತಾಸಿನ ಆ ಪಯಣದಲ್ಲೆ ಪ್ರೀತಿ ಪ್ರೇಮದ ಮಾತುಗಳು, ಹಾಸ್ಯ ಚಟಾಕಿಗಳು, ನಗು, ಕೋಪ ಜಗಳವೂ ಸಹ ಆಗಿ ಕಾರಿನಿಂದ ಇಳಿಯುವ ಹೊತ್ತಿಗೆ ರಾಜಿಯು ಸಹ ಆಗುತ್ತಿದ್ದದ್ದು, ಆಗೂ ಒಂದು ವೇಳೆ ರಾಜಿ ಆಗದೆ ಇದ್ದಿದರೆ ನೀನು ಕಾರಿಂದ ಇಳಿದು ಆಫೀಸ್ ಒಳಗೆ ಹೋದ ತಕ್ಷಣ ನಿನ್ನ ಮುದ್ದಿನ ಹೆಸರಿನೊಂದಿಗೆ ನನ್ನ ಮೊಬೈಲ್ ರಿಂಗ್ ಆಗುತ್ತಿದ್ದುದು, ಸಾರಿ ಅಪ್ಪು ಅಂತ ನೀ ಹೇಳುತ್ತಿದ್ದುದು ಎಲ್ಲವೂ ನೆನಪಿಗೆ ಇಳಿದವು.
ನನ್ನ ಮುಂದಿದ್ದ ಕ್ಯಾಸೆಟ್ ಒಳನೂಕಿದೆ. ಸ್ಟೀರಿಯೋನಲ್ಲಿ ನಿನ್ನ ನೆಚ್ಚಿನ ಹಾಡು ಬರುತ್ತಿತ್ತು. ಆಗಲ್ಲೂ ನೀ ನನ್ನ ಮನ ತುಂಬಿಕೊಂಡಿದ್ದೆ. ಹಾಡು ಮುಗಿಯಿತು, ನೀನಿಲ್ಲದೆ ಬೇಸರ ಅನಿಸಿತ್ತು. ಕ್ಯಾಸೆಟ್ ಹೊರ ತಗೆದು ರೇಡಿಯೊ ಕುವೈಟ್ ಗೆ ತಿರುಗಿಸಿದೆ ಅಲ್ಲು ಸಹ ಲಿಂಡ ವಟವಟ ಅನುತ್ತಿದ್ದಳು. ನಿನ್ನ ನೆನಪು ಹೋಗಲಿಲ್ಲ. ಅದನ್ನು ಸಹ ಆಫ್ ಮಾಡಿ ನಿನ್ನ ಮೆಚ್ಚಿನ ಸಾಂಗ್ ಗುನುಗಿಸಿದೆ "ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನೂ ನಮ್ಮ ಅಂತರಾಳವ........" ಕೊನೆಗೂ ಆಫೀಸ್ ತಲುಪಿದೆ ೭:೩೦ಕ್ಕೆ.
ಬೆಳಗಿನ ಒಂದು ತಾಸು ಬ್ಯುಸಿ ಕೆಲಸ ಆಫೀಸಿನಲ್ಲಿ ಮುಗಿಸಿದೆ. ೯ ಗಂಟೆಯೊಳಗೆ ನಿನ್ನ ಮತ್ತೊಂದು ಕಾಲ್ ನನ್ನ ಮೊಬೈಲ್ ಗೆ ಈಗ ಬರುತ್ತಿಲ್ಲ. ವಾಚ್ ನೋಡಿ ಅದಕ್ಕೆ ಎರಡುವರೆ ಗಂಟೆ ಸೇರಿಸಿ ನೀನು ಏನು ಮಾಡುತ್ತಿರುತ್ತೀಯಾ ಅಂತ ಊಹೆ ಮಾಡುತ್ತಾ ಇದ್ದೆ. ನೀನು ಬ್ಯುಸಿ ಇರಬಹುದೆಂದು ನನ್ನ ಮೊಬೈಲ್ ತಗೊಂಡು ಮೆಸೆಜ್ ಟೈಪ್ ಮಾಡಿದೆ. ಸ್ವಲ್ಪ ಸಮಯದ ನಂತರ "ಕುಇ ಕುಇ" ಅಂತ ಶಬ್ಧ ಮಾಡಿದ ನನ್ನ ಮೊಬೈಲ್ನಲ್ಲಿ ನೋಡಿದಾಗ ಮತ್ತದೆ ನಿನ್ನ ಪ್ರೀತಿಯ ಮುದ್ದಿನ ಸಾಲುಗಳು ಮತ್ತೆ ನಿನ್ನ ನೆನಪುಗಳ ಮರುಕಳಿಸಿತ್ತು.
ಸ್ವಲ್ಪ ಸಮಯ ಕಳೆದು ಲ್ಯಾಪ್ ಟಾಪ್ ತೆಗೆದು "ಜೀ ಟಾಕ್" ಒಪನ್ ಮಾಡಿದೆ, ನಿನ್ನ ಹೆಸರ ಪಕ್ಕದಲ್ಲಿ ಯಾವಗ ಹಸಿರು ಬಣ್ಣದ ಗುಂಡಿ ಬರುತ್ತದೆ ಎಂದು ಕಾತುರದಿಂದ ನೋಡುತ್ತಿದೆ. ನಿನ್ನ ಹೆಸರ ಬದಿ ಹಸಿರ ಬಿಂಬ ನೋಡಿ ಮತ್ತದೆ ಸಂಭ್ರಮ. ನಿನ್ನ ಜೊತೆ ಒಂದು ತಾಸು ಚಾಟ್ ಮುಗಿಸಿ ದಿನವೆಲ್ಲಾ ಆ ನಿನ್ನ ಮಾತುಗಳು ಮನದಲ್ಲೆ ಗುನುಗುತ್ತಿತ್ತು.
ಮಧ್ಯಾಹ್ನ ಹೊಟ್ಟೆ ಹಸಿವಾಯಿತು, ಪ್ರತಿ ದಿನ ಈ ಹೊತ್ತಿಗೆ ನಿನ್ನ ಫೋನ್ ಬರುತ್ತಿದುದ್ದು, ನಾನು ಊಟ ಮಾಡುತ್ತಿದ್ದೇನೆ ನೀನು ಊಟ ಮಾಡು ಅಂತ ನೀ ಹೇಳುತ್ತಿದ್ದದ್ದು ಎಲ್ಲವು ಮರುಕಳಿಸಿದ್ದು ನಾ ಬಾಕ್ಸ್ ತೆಗೆದು ಮೊಸರನ್ನ ತಿನ್ನುತ್ತಾ ಇದ್ದಾಗ. ದೂರ ದೂರ ಇದ್ದರೂ ಒಂದೆ ಹೊತ್ತಿಗೆ ಇಬ್ಬರು ಊಟ ಮಾಡುತ್ತಿದೆವು. ನೀನಿಲ್ಲದ ಜೀವನ ಲವಣವಿಲ್ಲದ ಭೋಜನದಂತ್ತಿತ್ತು. ಮನವೂ ಸಪ್ಪೆಯಾಗಿತ್ತು, ಊಟವೂ ಸಪ್ಪೆಯಾಗಿತ್ತು. ೩ ಗಂಟೆಗೆ ಮಗನಿಂದ ಫೋನ್ ರಿಂಗ್ ಆಗಲಿಲ್ಲ "ಅಪ್ಪ ಎಲ್ಲಿದ್ದೀಯಾ, ಬ್ರಿಂಗ್ ತಿಂಡಿ...." ಅನ್ನೊ ಮುದ್ದು ಸ್ವರ ನೆನಪಾಯಿತು. ಅಂತೂ ಇಂತೂ ಸಂಜೆಯ ತನಕ ಆಫೀಸಿನಲ್ಲಿ ಕಾಲ ಹಾಕಿದೆ. ಸಂಜೆ ೪ ಕ್ಕೆ ಮೊದಲಿನ ಹಾಗೆ ನಿನ್ನ ಕರೆ ಬರಲಿಲ್ಲ ಬಾ ಬೇಗ ಗೂಡಿಗೆ ತೆರಳೋಣ ಎಂದು. ಆಫೀಸ್ ಸಮಯ ಮುಗಿದರೂ ಮನೆಗೆ ಹೋಗಿ ಏನು ಮಾಡುವುದು ಅಂತ ಇನ್ನು ಎರಡು ತಾಸು ಹೆಚ್ಚು ಕುಳಿತೆ, ಈ ಮೊದಲು ಸರಿಯಾದ ಸಮಯಕ್ಕೆ ಹೊರಡುತ್ತಿದ್ದರಿಂದ ಎಲ್ಲರೂ ಕೇಳುತ್ತಿದ್ದರು ಮನೆಯಲ್ಲಿ ಹೆಂಡತಿ ಇಲ್ಲವಾ ಎಂದು. ಆಗಸದಲ್ಲಿನ ಕೆಂಪು ಸೂರ್ಯ ಭೂಮಿಯನ್ನು ತಬ್ಬಲು ಬರುತ್ತಿದ್ದುದ್ದು ಕಿಟಕಿಯಲ್ಲಿ ಕಂಡು ವಾಚ್ ಕಡೆ ನೋಡಿದೆ, ಸರಿ ಹೊರಡೋಣ ಅನ್ನಿಸಿ ಕೊನೆಯಲ್ಲಿ ಲ್ಯಾಪ್ಟಾಪ್ ನಲ್ಲಿ ಚೆಂದದ ನಗು ಮೊಗವನೊಮ್ಮೆ ನೋಡಿ ಕಾರ್ ಏರಿದೆ. ಎಂದಿನಂತೆ ದಾರಿಯಲ್ಲಿ ಆಫೀಸ್ ಸಮಚಾರ ವಿನಿಮಯಗಳು ಇಲ್ಲವಾಗಿದ್ದವು. ಬೆಳಗಿನ ಜಗಳ ರಾಜಿ ಆಗಿ ಸಂಜೆಗೆ ಪ್ರೀತಿ ಹೆಚ್ಚುತ್ತಿದ್ದ ಬದಲಾಗಿ ಮೌನದ ಪಯಣವಾಗಿತ್ತು.
ಮನೆಗೆ ತಲುಪಿ ಸ್ನಾನ ಮುಗಿಸಿ ಟಿವಿ ಮುಂದೆ ಕೂತು ದಾರಾವಾಹಿಗಳೆಲ್ಲ ಮುಗಿಸಿ ಗಡಿಯಾರ ನೋಡಿ ಅದಕ್ಕೆ ಎರಡುವರೆ ಗಂಟೆಯ ಲೆಕ್ಕ ಹಾಕಿ "ಊಟ ಮಾಡು ನೀನು" ಅಂತ ಮೆಸೆಜ್ ಕಳಿಸಿದ ಸ್ವಲ್ಪ ಹೊತ್ತಿಗೆ "ನಾನು ಮಲಗುತ್ತಿದ್ದೀನಿ, ನೀನು ಊಟ ಮಾಡು ಕಂದ" ಅಂತ ಪ್ರತಿಯುತ್ತರದ ಮೆಸೆಜ್ ನೋಡಿ ಅಡುಗೆಕೋಣೆಗೆ ಹೊರಟೆ. ಹಸಿದ ಹೊಟ್ಟೆಗೆ ಯಾವುದೊ ನಳಪಾಕ ಇಳಿಸಿ ಅದ ನೀಗಿಸಿದೆ. ಕನಸುಗಳು ಬರುವುದಕ್ಕೆ ಇನ್ನು ಸಮಯ ಇದ್ದುದರಿಂದ ಬೇಗ ಮಲಗಲು ಇಲ್ಲ, ಮತ್ತೆ ಟಿವಿ ಮುಂದೆ ಕೂತು ಗಣೇಶ್, ಪುನೀತ್ ಹಾಡುಗಳನೆಲ್ಲಾ ನೋಡಿದ ಕಣ್ಣುಗಳು ಸಾಕು ಇನ್ನು ನಡೆ ಎಂದಾಗ ಹಾಸಿಗೆ ಕಡೆ ನಡೆದೆ. ಕಿಟಕಿಯಲ್ಲಿ ಚೆಂದಮಾಮ ಆಗಲೆ ನಿನ್ನನ್ನು ನಮ್ಮುರಲ್ಲಿ ಮಲಗಿಸಿ ನನ್ನನ್ನು ಈ ಊರಲ್ಲಿ ಮಲಗಿಸಲು ಬಂದಿದ್ದ. ನೀನು ಅಲ್ಲಿ ಮಲಗಿದ್ದೀಯಾ ಅಂತ ಚಂದಿರನನ್ನು ನೋಡಿ ಮಲಗಿದೆ. ಮತ್ತದೆ ನೆನಪುಗಳ ಸರಮಾಲೆಯೊಂದಿಗೆ ಮನಸು ನಿದ್ರಿಸಿತು.
ಸವಿಕನಸು ಮೃದುಮನಸಿನ ಜೊತೆ ಸೇರಿತು.