ನಿನಗಾಗಿ ನನ್ನವರ ತೊರೆದೆ ಮನೆ ಮನವ
ಯಾರಿಲ್ಲ ತೋಡಿಕೊಳ್ಳಲೀಗಾ ಮನದ ನೋವ....
ನಿನ್ನ ವರಿಸಿ ಕಳೆಯಿತೊಂದು ವರ್ಷ
ದಿನ ದಿನ ಮರೆಯಾಗುತಿದೆ ಹರ್ಷ....
ಕರ್ತವ್ಯದ ಕರೆಗೆ ಒಗೊಟ್ಟು
ಹೊರಟೆ ನೀ ನನ್ನ ಬದಿಗಿಟ್ಟು....
ನಿನ್ನ ಜೊತೆ ಕಳೆದ ದಿನಗಳು ಕಾಡುತ್ತೆ ಹಗಲಿರುಳು
ನಿನ್ನ ಕರುಳ ಕುಡಿಗೀಗಾ ಏಳು ತಿಂಗಳು.....
ಮೂಡಿದೆ ನನಗೀಗಾ ಹಲವಾರು ಬಯಕೆ
ನಿನ್ನ ಬಂದೊಮ್ಮೆ ಸೇರುವಾಸೆ ಮನಕೆ.....
ಕಣ್ಣೀರ ಒರೆಸಲು ನನಗಿಲ್ಲ ಅಕ್ಕ ತಂಗಿ
ನೀ ಒಂಟಿ ಎಂದು ಹೇಳುತಿದೆ ಮನ ಕೂಗಿ.....
ನೀ ಹೋದ್ಮೇಲೆ ತಿರುಗಿದೆ ಕ್ಯಾಲೆಂಡರಿನ ಆರು ಪುಟಗಳು
ಕಾತುರದಿ ನಿನ್ನ ನೋಡಲು ಏಣಿಸುತ ದಿನಗಳು....
ಬಂದು ಹೋಗುವೆಯಾ ನಲ್ಲ ಒಮ್ಮೆ
ನಾನಿನ್ನ ಕರುಳಕುಡಿಗೆ ಜನ್ಮ ನೀಡುವ ಮುನ್ನ.......