ಗುರುವಾರ, ಆಗಸ್ಟ್ 14, 2014

ಸ್ವಸಂತ್ರ ದಿನ by ಸಾಸಕರು

ಪ್ರತಿ ವರ್ಷದಂಗೆ ಈ ಕಿತನೂ ಸ್ವಸಂತ್ರ ದಿನ ಮಾಡಣ ಅಂತ ಸಾಸಕರ ಹತ್ರ ಹೋದ್ವಿ. ಸಾಸಕರು ಸ್ಯಾನೆ ಖುಸಿನಾಗಿದ್ರೂ ಮಖ ಯಾಕೊ ವಸಿ ಬಾಡಿತ್ತು. ನೋಡ್ರಲಾ ಈಗ ನಾನು ಸಾಸಕ ಅಲ್ಲ ಲೋಕಸಭಾ ಸದಸ್ಯ...ಡೆಲ್ಲಿಗೋಗಿ ಬಂದಿವ್ನಿ..ಹೋದ ಸಲಕಿಂತ ಜೋರಾಗಿ ಮಾಡಬೇಕು ಕನ್ರಲಾ ಅಂದರು. ಆಯ್ತಣ್ಣೊ ಅಂತ ಯಲ್ಲ ಒಪ್ಪಿಕೊಂಡ್ವಿ....ಸ್ಯಾನೆ ಜನ ಸೇರಿಸಬೇಕು ಕನ್ರಲಾ...ಟಿವಿನಾಗೆ ಬರಬೇಕು. ಹೋದ ಕಿತ ತರ ಕಾಂಗ್ರಸ್ ಬಾವುಟ ಕಟ್ಟದೆ ನಮ್ಮ ದೇಸದ ಬಾವುಟನೇ ಕಟ್ಟಬೇಕು...ದಾರ ಯಳಿತ್ತಿದ್ದಂಗೆ ಬಿಚ್ಚಿಕೊಬೇಕು ಬಾವುಟ ಅಂದರು. ಆಯ್ತಣ್ಣೊ ಕಿಸ್ನನ ಲಾಡಿ ತರನೇ ಕಟ್ಟುತ್ತೀವಿ ಅಂದ ಕಳ್ ಮಂಜ. ಹತ್ತು ಸಾವಿರ ಚೇರ್ ಹಾಕಿಸ್ರಲಾ ಮೈದಾನದಾಗೆ ಅಂದ್ರು..ಆಯ್ತಣ್ಣೊ ಅಂತ ಒಂದಷ್ಟು ಕಾಸು ಕಿತ್ಕೊಂಡು ಬಂದ್ವಿ....ಕಳ್ ಮಂಜ ಯಲ್ಲ ಅರೆಂಜ್ ಮೆಂಟ್ ಮಾಡ್ತೀನಿ ಅಂತ ವಹಿಸಿಕೊಂಡ. ಮೈದಾನ ದಾಗೆ ಶಾಮಿಯಾನ, ಮೈಕ್ ಸೆಟ್ಟು, ಹತ್ತು ಸಾವಿರ ಚೇರು, ಜನರಿಗೆ ತಿಂಡಿ ತೀರ್ಥ ಯಲ್ಲಾ ವ್ಯವಸ್ಥೆ ಆತು. 

ಸ್ವಸಂತ್ರದ ದಿನ ಬಂದೇ ಬುಡ್ತು. ಜನ ಸಿಕ್ಕಾಪಟ್ಟೆ ಜಮಾಯಿಸಿದ್ರು. ವೇದಿಕೆ ಮ್ಯಾಗೆ ಗಣ್ಯ ವ್ಯಕ್ತಿಗಳು ಕುಂತಿದ್ದರು. ಸಾಸಕರು ಬಂದು ಬಾವುಟ ಹಾರಿಸಿದ್ರು. ಆದ್ರೆ ಯಾಕೊ ಚೇರ್ ಮ್ಯಾಗೆ ಕೂರಲೇ ಇಲ್ಲ....ಯಾಕಲಾ ಕೂರಕಿಲಾ ಈ ವಯ್ಯ ಅಂದ ಮಂಜ....ಬೇಗ ಹೋಗಬೇಕೆನೊ ಬುಡಲಾ ಅಂದ ಕಿಸ್ನ....ಹಾರ ಹಾಕಿದ್ದು ಆತು. ಭಾಷಣ ಕೊರೆದ್ರು....ಮೈಕ್ ತಕ್ಕಂಡು ಗಾಂಧೀಜಿ ಬಗ್ಗೆ ಮಾತಾಡದೆ ವಿವೇಕಾನಂದನ ಬಗೆ ಮಾತಾಡುತ್ತ ಇದ್ದರು....

ಜನರಿಗೆ ಕಂಪ್ಯೂಜ್ ಆತು...ವಿವೇಕಾನಂದನೂ ಸ್ವಸಂತ್ರಕ್ಕೆ ಹೋರಾಡಿರಬಹುದು ಅಂಕಂಡರು...ಕೊನೆಗೆ ವಿವೇಕಾನಂದನ ಸಾಲು ಹೇಳಿ ನಿಲ್ಲಿಸಿದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ಯಾರು ಕೂರಬೇಡಿ ಅಂತ ಬಂದ ಜನರನ್ನೆಲ್ಲಾ ಎಬ್ಬಿಸಿದ್ದರು....ಲೇ ಯಾಕಲಾ ಈ ವಯ್ಯ ಯಲ್ಲರನ್ನ ಎಬ್ಬಿಸಿದ ಅಂದ ಕಿಸ್ನ....ಯಾರಿಗೂ ಎನೂ ಗೊತ್ತಾಗಲಿಲ್ಲ....ಸಾಸಕರು ನಿಂತೆ ಇದ್ದರು...ಸಾಸಕರು ಕಳ್ ಮಂಜನ ಕಿವಿನಲ್ಲಿ ಎನೊ ಪಿಸುಗುಟ್ಟಿದರು....ಅಮ್ಯಾಕೆ ಮಂಜ ಮೈಕ್ ತಕ್ಕಂಡು ಯಲ್ಲರಿಗೂ ಧನ್ಯವಾದ ಹೇಳಿ ಕಳುಹಿಸಿದ. ಸಾಸಕರು ಏನೂ ಹೇಳಿರಲಾ ಅಂದ ಕ್ವಾಟ್ಲೆ ಕಿಸ್ನ...

ಲೇ ಆ ಮೂದೇವಿಗೆ ಪೈಲ್ಸ್ ಖಾಯಿಲೆ ಅಂತೆ ಕನಲಾ...ಬಿಳಿ ಬಟ್ಟೆ ಬ್ಯಾರೆ ಹಾಕಿದ್ರಲ್ಲ ಅದಕ್ಕೆ ವೇದಿಕೆ ಮ್ಯಾಗೆ ಆ ವಯ್ಯನೂ ಕೂರದೆ ಜನಗಳನ್ನು ಕೂರಕೆ ಬುಡದೆ ಎಬ್ಬಿಸಿದ. ಪೈಲ್ಸ್ ಜೊತೆಗೆ ಒಂದು ಕುರ ಬ್ಯಾರೆ ಆಗೈತಂತೆ ಸ್ಯಾನೆ ನೋವು ಕನ್ಲಾ ಮಂಜ ಅಂದರು......ಏನಾರೂ ಮಾಡಿ ತಡ್ಕಳಿ ಸಾ ಅಂದೆ ಕನ್ರಲಾ ಅಂದ ಕಳ್ ಮಂಜ....

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...

ಬುಧವಾರ, ಜನವರಿ 29, 2014

ಹಿತನುಡಿ


ಗೀಚಿದರು ಗುರುಗಳು 
ನಿನ್ನ ಕನಸು 
ನನಸಾಗಲೆಂದು...
ಶುಭ ಹಾರೈಕೆಗಳೊಂದಿಗೆ
ಮಾಯಸಂದ್ರ ವಸುಧೇಂದ್ರ ಮೂರ್ತಿ....
ಗರಮ್ ಗೊಂಡರು ಗುರುಗಳು
ಶಿಷ್ಯ ತಿದ್ದುಪಡಿ ಕೇಳಲು
ನಿನ್ನ ಸ್ವಪ್ನ 
ನನಸಾಗಲೆಂದು....
ಶುಭ ಹಾರೈಕೆಗಳೊಂದಿಗೆ
ಮಾ.ವ ಮೂರ್ತಿ....



ಶನಿವಾರ, ಜನವರಿ 25, 2014

ಗಣರಾಜ್ಯೋತ್ಸವ

ಕಳ್ ಮಂಜನಿಗೆ ಸಾಸಕರಿಂದ ಫೋನ್ ಬಂತು. ನೋಡಲಾ ಮಂಜ, ಈ ಕಿತ ಗಣರಾಜ್ಯೋತ್ಸವ ಅದ್ದೂರಿಯಾಗೆ ಮಾಡಬೇಕು. ಟಿವಿನಾಗೆ ನಮ್ಮ ತಾಲ್ಲೂಕ್ ಸುದ್ದಿ ಬರಬೇಕು. ಈ ಕಿತ MP election ಗೆ ನಿಂತ್ಕಂತಿನಿ. ಲಕ್ಸ ಖರ್ಚಾದರೂ ಪರವಾಗಿಲ್ಲ ಕನ್ಲಾ ಯಲ್ಲಾ ಸಂದಾಕಿ arrangement ಮಾಡಲಾ, ಭಾನುವಾರ ಬ್ಯಾರೆ ಜನ ಜಮಾಯಿಸಬೇಕು ಅಂದರು. ಆಯ್ತಣ್ಣೊ ಅಂತೇಳಿ ಯಲ್ಲರನ್ನು ಕರೆದು ಹೇಳಿದ.

ನೋಡ್ರಲಾ ಈ ಕಿತ ಪೆಸೆಲ್ ಇರಬೇಕು ಅಂತ ಸಾಸಕರು ಹೇಳವರೆ....ಹಂಗೆ ಮಾಡಮಾ ಕನ್ರಲಾ ಅಂದ. ಯಲ್ಲರಿಗೂ ಒಂದೊಂದು ಕೆಲಸ ವಹಿಸಿದ. ಇಸ್ಕೂಲ್ ಮುಂದೆ ಮೈದಾನದಾಗೆ ಯಲ್ಲ arrangement ಮಾಡಿದ. ಸಿದ್ಲಿಂಗುಗೆ ಫೋನ್ ಮಾಡಿ ಬೆಂಗಳೂರಿನಿಂದ ಜನರನ್ನ ಕರೆಸ್ತೀನಿ ಅಂದ.
ಸಾಸಕರಿಂದ ಕಾಸ್ ಇಸ್ಕಂಡು ಪ್ರಚಾರ ಯಲ್ಲ ಮಾಡಿಸಿದ. ಬೆಂಗಳೂರಿಗೂ ಸಹ ಹೋಗಿ ಬಂದ.


ಭಾನುವಾರ ಬಂದೆ ಬುಡ್ತು. ಜನ ಸಿಕ್ಕ ಪಟ್ಟೆ ಜಮಾಯಿಸಿದರು. ಸಾಸಕರ ಕಾರ್ ಬಂತು. ಯಲ್ಲ arrangement ನೋಡಿ ದಂಗಾದರು. ನೀವು MP ಆಯ್ತೀನಿ ಅಂದ್ರಲಾ ಸಾ ಅದಕ್ಕೆ Delhi ತರ ಪೆರೇಡ್ ಅರೆಂಜ್ ಮಾಡಿವ್ನಿ ಅಂದ ಕಳ್ ಮಂಜ. ಮೈದಾನ ದಾಗೆ uniform ಹಾಕೊಂಡು Left Right ಅಂತ ಅಂಕಂಡು ಜನ ನಿಂತಿದರು. ಐದಾರು ತರಹದ ತಂಡಗಳು. ಒಂದೊಂದು ತಂಡದಲ್ಲಿ ಸುಮಾರು ಇಪ್ಪತ್ತು ಜನ ಇದ್ದರು. 

ಕ್ಯಾಂಟರ್ ಗಾಡಿನ ಯಲ್ಲ ಕವರ್ ಮಾಡಿ ಸ್ತಬ್ಧದೃಶ್ಯ (tableau) ಮಾಡಿಸಿದ್ದ. ಇಮಾಮ್ ಸಾಬಿದು ಮಟನ್ ಸಾಗಿಸೊ ಲಗ್ಗೇಜ್ ಅಟೋ ಸಹ ಸ್ತಬ್ಧದೃಶ್ಯಕ್ಕೆ ಬಳಸಿದ್ದ. ಮೈಕ್ ಸೆಟ್ ನಲ್ಲಿ ಬರೀ ಕನ್ನಡ ಹಾಡು ಹಾಕಿಸಿದ್ದ. ಪೆರೇಡ್ ಸುರು ಆಯ್ತು. ಕ್ಯಾಂಟರ್ ಗಾಡಿಗಳು ಮುಂದೆ... ಅದರ ಹಿಂದೆ left right ಅಂತ military ಗಳ ತರನೆ ತಂಡಗಳು ಹೋದವು. ಕೈನಲ್ಲಿ plastic gun ಬ್ಯಾರೆ ಇದ್ದವು. ಸಾಸಕರು ಗೌರವ ವಂದನೆ ಸ್ವೀಕರಿಸಿದರು. ಮುಗಿತೇನಲಾ ಕೈ ನೊಯ್ತದೆ salute ಮಾಡಿ ಅಂತಿದ್ದರು. ಮೈಕಲ್ಲಿ ಮಾತ್ರ ನಾವಾಡುವ ನುಡಿಯೆ ಕನ್ನಡ ನುಡಿ ಹಾಡು ಬತ್ತ ಇತ್ತು....ಇಮಾಮ್ ಸಾಬಿ ಲಗ್ಗೇಜ್ ಅಟೋ ಅರ್ಧದಲ್ಲಿ ಮದ್ಯ ಕೆಟ್ಟು ಹೊಯ್ತು...ಅಮ್ಯಾಕೆ ತಳ್ಳಿ ಸೈಡಿಗೆ ನಿಲ್ಲಿಸಿದರು. ಸಾಸಕರು ಬಾವುಟ ಹಾರಿಸಿದರು. ಕಳ್ ಮಂಜ ಒಂದು ಗನ್ ತಕ್ಕಂಡು ಆಕಾಶಕ್ಕೆ ಮೂರು ಗುಂಡು ಹಾರಿಸಿದ. ಒಂದು bullet just miss ಆಗಿ ತೆಂಗಿನಮರಕ್ಕೆ ಬಿತ್ತು. 

ಯಲ್ಲ ಆದಮ್ಯಾಕೆ ಸಾಸಕರು ಕಳ್ ಮಂಜನಿಗೆ ಕಾಸ್ ಕೊಟ್ಟು ಹೊಳಟರು. ಮಂಜ ಯಲ್ಲರಿಗೂ ಕಾಸ್ ಹಂಚಿ ಕಳಿಸಿದ. ಸಿವಮ್ಮನ ಹೋಟೆಲ್ ತವ ಯಲ್ಲ ಜನ ಕೇಳಿರು. military ನಾ ಎಲ್ಲಿಂದ ಕರೆಸಿದ್ಯಲಾ ಅಂತ...ಆಗ ಬಾಯಿ ಬುಟ್ಟ...ಲೇ ಬಡ್ಡೆತವ...ಅವರು military ಅಲ್ಲ ಕನ್ಲಾ...ಬೆಂಗಳೂರಲ್ಲಿ security ಕೆಲಸ ಮಾಡೋರು ಕನ್ಲಾ....ಸಿದ್ಲಿಂಗು ಆಫೀಸ್ ತವ ಸುತ್ತ ಮುತ್ತ ಯಲ್ಲ security gaurd ಗಳಿಗೆಲ್ಲಾ ರಜೆ ಇತ್ತಲ್ಲ ಅದಕ್ಕೆ ಅವರನ್ನೆಲ್ಲಾ ಕರೆಸಿದ್ದೆ uniform ಹಾಕಂಡ್ plastic gun ತಕ್ಕಂಡ್ ಬನ್ನಿ ಅಂತ. ಮತ್ತೆ ನೀನು ಗುಂಡು ಹಾರಿಸಿದ್ದು ಅಂದರು....ಅದಾ ಪೊಲೀಸ್ ಟೇಸನ್ ತವ ಬಾಗಿಲಲ್ಲಿ gunman ದು ಕನ್ಲಾ.....ನೆನ್ನೆ ರಾತ್ರಿ night duty ಮಾಡೋನು ತೂಕಡಿಸುವಾಗ ಹೊಡಕೊಂಡು ಬಂದೆ ಅಂದ.

ವಿಶೇಷ ಸುದ್ದಿ ಅಂತ TV9 ನವರು ತೋರಿಸುತ್ತ ಇದ್ದರು. ಕಳ್ ಮಂಜನಿಗೆ ಸಾಸಕರ ಫೋನ್ ಬಂತು....ಲೇ ಬಡ್ಡೆತ್ತದೆ ಬಾವುಟ ಯಾವುದಲಾ ಕಟ್ಟಿದೆ....ನಮ್ಮ ದೇಸದ್ದು ಅಲ್ವೇನಲಾ ಕಟ್ಟೋದು ಅಂದರು....ಅಣ್ಣೊ ಅದು ನಮ್ಮ ದೇಶದ್ದೆ ಅಂದ ಮಂಜ.....ಲೇ ಅದು ಹಷಣ ಕೆಂಪು ಕನ್ನಡ ಬಾವುಟ ಕಟ್ಟಿದಲ್ಲೊ...TV9 ಅದೆ ತೋರಿಸಿ ರುಬ್ಬುತ ಅವರೆ ಅಂದರು ಸಾಸಕರು...

ಅಣ್ಣೊ ನೀವೆ ಹೇಳಿರಿ ಗಣ "ರಾಜ್ಯೋತ್ಸವ" ಆಚಾರಣೆ ಮಾಡಮ ಅಂತ ಅದುಕ್ಕೆ ನಾನು ಆ ಬಾವುಟ ಕಟ್ಟಿಸಿದ್ದೆ ಅಂದ.
ಥೂ ನಿನ್ನ ಮಕ್ಕೆ ಕಾದ ಯಣ್ಣೆ ಉಯ್ಯ....